ಮೈಸೂರು

ಇಷ್ಟಾರ್ಥ ಸಿದ್ಧಿ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಕಳ್ಳತನ : ಹುಂಡಿಯ ಹಣ, ಬೆಳ್ಳಿ ಪದಾರ್ಥ ದೋಚಿ ಪರಾರಿ

ಮೈಸೂರು,ಅ.29:- ಇಷ್ಟಾರ್ಥ ಸಿದ್ಧಿ ಸಂಕಷ್ಟಹರ ಗಣಪತಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆಹುಂಡಿಯಲ್ಲಿದ್ದ ಹಣ ಹಾಗೂ ದೇವಸ್ಥಾನದಲ್ಲಿದ್ದ ಬೆಳ್ಳಿ ಪದಾರ್ಥಗಳನ್ನು ಕದ್ದೊಯ್ದ ಘಟನೆ ಕೆ.ಜಿ.ಕೊಪ್ಪಲು ಮುಖ್ಯರಸ್ತೆಯಲ್ಲಿ ನಡೆದಿದೆ.
ನಿನ್ನೆ ಎಂದಿನಂತೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ದೇವಸ್ಥಾನದ ಅರ್ಚಕರು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಮತ್ತೆ ದೇವಸ್ಥಾನಕ್ಕೆ ಪೂಜೆಗೆಂದು ಬಂದ ವೇಳೆ ಕಳ್ಳತನ ಕೃತ್ಯ ಬಯಲಿಗೆ ಬಂದಿದೆ. ದೇವಸ್ಥಾನದ ಬಾಗಿಲು ತೆರೆದಿದ್ದು ಹುಂಡಿಯ ಬಳಿ ಚಿಲ್ಲರೆ ನಾಣ್ಯಗಳು ಬಿದ್ದಿದ್ದವು. ಸರಿಯಾಗಿ ಗಮನಿಸಿದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ. ಹಲವು ಬೆಳ್ಳಿ ಪದಾರ್ಥಗಳೂ ನಾಪತ್ತೆಯಾಗಿವೆ ಎನ್ನಲಾಗಿದೆ. ಕೂಡಲೇ ಸರಸ್ವತಿಪುರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಸ್ಥಳೀಯರು ಮಾತನಾಡಿ ಇದು ಮುಖ್ಯರಸ್ತೆ. ಇಲ್ಲಿ ಜನಸಂಚಾರ ಸದಾ ಇರುತ್ತದೆ. ಇಂತಹ ಸ್ಥಳದಲ್ಲಿಯೇ ಕಳ್ಳರು ಕಳ್ಳತನ ನಡೆಸಿದ್ದಾರೆ ಅಂದರೆ ಜನಸಂಚಾರವಿಲ್ಲದ ಸ್ಥಳಗಳಲ್ಲಿ ಇನ್ನೆಷ್ಟು ಕಳ್ಳತನ ನಡೆಯಬಹುದು. ಪೊಲೀಸರು ಈ ಕುರಿತು ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: