
ಮೈಸೂರು
ಆರ್.ಟಿ.ಐ ಕಾರ್ಯಕರ್ತನ ಶವ ಪತ್ತೆ
ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನದ ಸಮೀಪ ಆರ್.ಟಿ.ಐ ಕಾರ್ಯಕರ್ತನೋರ್ವರ ಶವ ಪತ್ತೆಯಾಗಿದೆ.
ಕುವೆಂಪು ನಗರದ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ನಗರ ನಿವಾಸಿ ಶ್ರೀನಾಥ್ (30) ಎಂಬವರೇ ಶವವಾಗಿ ಪತ್ತೆಯಾಗಿದ್ದಾರೆ. ಇವರು ಗುರುವಾರದಿಂದ ನಾಪತ್ತೆಯಾಗಿದ್ದರು ಎಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಅವರ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಇವರು ಆರ್.ಟಿ.ಐ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು.
ಬೆಮೆಲ್ ಸೊಸೈಟಿಯ ಅವ್ಯವಹಾರದ ಕುರಿತು ಇವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಮುಡಾ ಸಹಾಯಕ ಇಂಜಿನಿಯರ್ ಮಹೇಶ್ ಎಂಬವರ ಮನೆ ಮೇಲಿನ ಐಟಿ ಅಧಿಕಾರಗಳ ದಾಳಿಗೂ ಇವರೇ ಮಾಹಿತಿ ನೀಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸ್ಥಳಕ್ಕೆ ಪೊಲೀಸ್ ಶ್ರೀರಂಗಪಟ್ಟಣ ಪೊಲೀಸ್ ಇನ್ಸಪೆಕ್ಟರ್ ದೀಪಕ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಖ ಹಾಗೂ ಕುತ್ತಿಗೆಯ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ತನಿಖೆಯ ಬಳಿಕವೇ ತಿಳಿದು ಬರಬೇಕಿದೆ.