ಮೈಸೂರು

ನ.1 ರಿಂದ ಮೈಸೂರು ಆಕಾಶವಾಣಿಯಲ್ಲಿ `ಪದಸಂಸ್ಕೃತಿ’

ಮೈಸೂರು,ಅ.30-ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೈಸೂರು ಆಕಾಶವಾಣಿ ವತಿಯಿಂದ ನ.1 ರಿಂದ `ಪದಸಂಸ್ಕೃತಿ’ ಆರಂಭಿಸಲಾಗುತ್ತಿದೆ ಎಂದು ಆಕಾಶವಾಣಿ ಸಹಾಯಕ ನಿರ್ದೇಶಕ ಎಚ್.ಶ್ರೀನಿವಾಸ ತಿಳಿಸಿದರು.

ಆಕಾಶವಾಣಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ಸಹ ಕನ್ನಡದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪದಸಂಸ್ಕೃತಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ, ಏಕ ಕಾಲಕ್ಕೆ ರಾಜ್ಯದ ಎಲ್ಲ 13 ಆಕಾಶವಾಣಿ ಬಾನುಲಿ ಕೇಂದ್ರಗಳಲ್ಲಿ ಬೆಳಿಗ್ಗೆ 6.45 ರಿಂದ 6.55 ರವರೆಗೆ ಪದಸಂಸ್ಕೃತಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದರು.

ಕನ್ನಡ ಭಾಷಾಸಂಸ್ಕೃತಿಯೊಳಗೆ ಹೇರಳವಾಗಿರುವ ಹಾಗೂ ಅಪರೂಪವಾಗಿ ಬಳಸುವ ಪದಗಳನ್ನು, ಪದಪುಂಜಗಳನ್ನು ಕನ್ನಡಿಗರಿಗೆ ಮತ್ತೊಮ್ಮೆ ನೆನಪಿಸುವ, ಅದರ ಬಳಕೆಯ ಮಹತ್ವವನ್ನು ತಿಳಿಸುವ ಕನ್ನಡವನ್ನು ಬಳಸುವ ಹಾಗೂ ಬೆಳೆಸುವ ಕಾರ್ಯಕ್ರಮವೇ ಈ ಪದಸಂಸ್ಕೃತಿ. ಪ್ರತಿ ಕಾರ್ಯಕ್ರಮದ ಅವಧಿ 10 ನಿಮಿಷ. ಇದರಲ್ಲಿ 8 ನಿಮಿಷದ ಅವಧಿಯನ್ನು ಭಾಷಾ ತಜ್ಞರಿಗೆ ದೊರಕಿಸಿಕೊಡಲಿದೆ. ಕಾರ್ಯಕ್ರಮ ಸ್ವರೂಪಕ್ಕೆ ತಕ್ಕಂತೆ ಮಾಹಿತಿಯನ್ನು ಭಾಷಾ ತಜ್ಞರಿಂದ ಪಡೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಮೊದಲನೇ ಭಾಗ: ಪದ ಪರಿಚಯ (ಸಮಯಾವಕಾಶ 20 ಸೆಂಕೆಂಡ್) ಪ್ರತಿ ಕಾರ್ಯಕ್ರಮದಲ್ಲಿ ಎರಡು ಕನ್ನಡ ಪದಗಳಿಗೆ ಅದರ ಅರ್ಥ, ನಿಷ್ಪತ್ತಿ ಹಾಗೂ ವಾಕ್ಯಗಳಲ್ಲಿ ಬಳಸುವ ಬಗೆಯನ್ನು ತಿಳಿಸಲಾಗಿದೆ. ಪದಗಳಿಗೆ ಸಂಬಂಧಪಟ್ಟ ಸಮೀಪದ ಪದಗಳ ಬಗ್ಗೆಯೂ ತಿಳಿಸಲಾಗಿದೆ ಎಂದರು.

ಕರ್ನಾಟಕದ ವಿವಿಧ ಪ್ರದೇಶದಲ್ಲಿ ಮರೆಯಾಗುತ್ತಿರುವ ಮತ್ತು ಮರೆತುಹೋಗಿರುವ ವಿಶಿಷ್ಟ ಪದಗಳನ್ನು ಪುನಃ ಪರಿಚಯಿಸುವ ಹಾಗೂ ಬಳಕೆಗೆ ಪ್ರೋತ್ಸಾಹಿಸುವ, ಆಯ್ಕೆ ಮಾಡಿಕೊಂಡ ಪದಗಳಿಗೆ ಇರುವ ವಿವಿಧ ಆಯಾಮಗಳನ್ನು ಪರಿಚಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎರಡನೇ ಭಾಗ: ತಪ್ಪು-ಒಪ್ಪು (ಸಮಯಾವಕಾಶ 30 ಸೆಕೆಂಡ್) ವ್ಯಾಕರಣ ದೋಷಗಳಿಂದ ಮಾತನಾಡುವಾಗ ಹಲವು ತಪ್ಪುಗಳು ಸಂಭವಿಸುತ್ತವೆ. ಅಂತಹ ತಪ್ಪುಗಳನ್ನು ಉದಾಹರಣೆ ಸಹಿತ ವಿವರಿಸಿ ಸರಿಯಾದ ಬಳಕೆಯನ್ನು ಹೇಳಲಾಗುತ್ತದೆ. ತಪ್ಪು ಉಚ್ಚಾರಣೆಯಿಂದ ಆಗುವ ಅನರ್ಥವನ್ನು ತಿಳಿಯಪಡಿಸಲಾಗುತ್ತದೆ ಎಂದರು.

ಮೂರನೇ ಭಾಗ: ಸಮಯಾವಕಾಶ 6 ನಿಮಿಷಗಳು (ಹಾಡಿಗೆ 3 ನಿಮಿಷ + ವಿವರಣೆಗೆ 3 ನಿಮಿಷ) ಒಂದು ಗೀತೆ, ಪದ್ಯ, ಹಾಡನ್ನು ಪ್ರಸಾರ ಮಾಡುತ್ತೇವೆ. ಆ ಗೀತೆಗೆ ವಿವರಣೆಯನ್ನು, ಸಾರಾಂಶವನ್ನು ತಿಳಿಸುವು ಗೀತೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ನೀಡಿ. ಹಾಗೆಯೇ ಆ ಹಾಡಿನಲ್ಲಿ ಅಡಕವಾಗಿರುವ ಯಾವುದಾದರು ಒಂದು ವಿಶಿಷ್ಟ ಪದವನ್ನು ಆರಿಸಿ ಅದಕ್ಕೆ ಅರ್ಥವನ್ನು ನೀಡಿ ಹಾಗೂ ಆ ಪದ ಆ ಗೀತೆಗೆ ಹೇಗೆ ಸೂಕ್ತವಾಗಿದೆ ಎಂಬುದನ್ನು ವಿವರಿಸಲಾಗುತ್ತದೆ ಎಂದು ಹೇಳಿದರು.

ಅಲ್ಲದೆ, ನವೆಂಬರ್ 2 ರಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಹರಿಯನ್ನರಸಿದ ವನಿತೆಯರು ಸರಣಿ ಕಾರ್ಯಕ್ರಮ ಪ್ರಸಾರವಾಗಲಿದ್ದು, 30 ನಿಮಿಷ ಪ್ರಸಾರವಾಗುತ್ತದೆ. ಒಟ್ಟು 14 ಕಾರ್ಯಕ್ರಮಗಳು, 64 ಹೊಸ ಕೀರ್ತನೆಗಳ ಪರಿಚಯ ಮಾಡಿಕೊಡಲಾಗುವುದು. ಕಾರ್ಯಕ್ರಮದಲ್ಲಿ 13 ವನಿತೆಯರ ಕೀರ್ತನೆಗಳನ್ನು ಆಯ್ದುಕೊಳ್ಳಲಾಗಿದೆ. ಮುಳಿಯ ಮೂಕಾಂಬಿಕಾ, ನಂಜನಗೂಡು ತಿರುಮಲಾಂಬಾ, ಸರಸ್ವತೀ ಬಾಯಿ, ಅಂಬಾ ಬಾಯಿ, ಜಂಜೂರು ಸಾವಿತ್ರಮ್ಮ ಮೈಲಾರಯ್ಯ, ಪದ್ಮಬಾಯಿ ಕೋಲಾರ, ದ್ವಾರಕಾಬಾಯಿ ಗಡಚಿಂಕಿ, ಮಂಜುಳ ಸುಬ್ಬರಾವ್, ಜಲಜಾ ಗಂಗೂರ, ಸುಶೀಲಾ ಕಾಂತರಾವು, ಡಾ.ಟಿ.ಎನ್.ನಾಗರತ್ನ, ಚಿ.ರಮಾದೇವಿ, ನರಸಪುರದ ಡಾ.ವನುಜಾ ಉಪೇಂದ್ರ ಅವರ ಕೀರ್ತನೆಗಳನ್ನು ಆಯ್ದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕೀರ್ತನೆಗಳು ಹೊರಜಗತ್ತಿಗೆ ಹೆಚ್ಚು ಪರಿಚಯವಾಗಿಲ್ಲ. ಮೈಸೂರು ಆಕಾಶವಾಣಿ ಇವರನ್ನು ಪರಿಚಯಿಸುವ ನಿಮಿತ್ತ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಪರಿಕಲ್ಪನೆ, ನಿರೂಪಣೆ ಮತ್ತು ನಿರ್ದೇಶ ಹೆಸರಾಂತ ಸಂಗೀತದಾರರಾದ ಡಾ.ಸುಕನ್ಯಾ ಪ್ರಭಾಕರ್ ಅವರದ್ದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಸುನೀಲ್ ಭಾಟಿಯಾ ಹಾಜರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: