
ಮೈಸೂರು
ಸರ್ಕಾರಿ ಶಾಲಾ ಮಕ್ಕಳ ಶೂ ಖರೀದಿಯಲ್ಲಿ ಅವ್ಯವಹಾರ : ತನಿಖೆಗೆ ಒತ್ತಾಯಿಸಿ ಮನವಿ
ಮೈಸೂರು,ಅ.30:- ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಶೂ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ಇಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಹೋರಾಟಗಾರ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮನವಿ ಸಲ್ಲಿಸಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಶೂ ಖರೀದಿಯಲ್ಲಿ ಅವ್ಯವಹಾರ, ಹಣ ದುರುಪಯೋಗವಾಗಿರುವುದರ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳ ಕುರಿತು ಅನುಮಾನ ಮೂಡಿದೆ. ತಾವು ಶೂ ಖರೀದಿಯ ಕುರಿತು ಗಂಭೀರವಾಗಿ ಪರಿಗಣಿಸಿ ಈ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭ ವಕೀಲ ಹರದೂರು ಜವರೇಗೌಡ,ರಾಜುಮಾರ್ಕೆಟ್, ವಿನೋದ,ನಾಗವಾಲ ತಿಮ್ಮನಾಯಕ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)