ಪ್ರಮುಖ ಸುದ್ದಿಮೈಸೂರು

ಸಾಹಿತ್ಯ-ವೈದ್ಯಕೀಯ ಯಾತನೆ ಕಡಿಮೆ ಮಾಡುತ್ತದೆ : ಜಯಂತ ಕಾಯ್ಕಿಣಿ ಅಭಿಮತ

jayanta-1ಸಾಹಿತ್ಯ ಮತ್ತು ವೈದ್ಯಕೀಯ ಎರಡು ಸಹ ಮಾನವನ ಯಾತನೆಯನ್ನು ಕಡಿಮೆ ಮಾಡುತ್ತದೆ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಶುಕ್ರವಾರ  ಜೆ.ಕೆ. ಮೈದಾನದ ಅಮೃತ ಮಹೋತ್ಸವದ ಮಿಲನಿಯಮ್ ಹಾಲ್‌ನಲ್ಲಿ ಆಯೋಜಿಸಿದ್ದ ಚಲನ ಸಾಹಿತ್ಯ ವೇದಿಕೆಯನ್ನು ಜಯಂತ್ ಕಾಯ್ಕಿಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಪ್ರಕಾರ ಆಸ್ಪತ್ರೆಗಳು ಕೂಡ ಒಂದು ಆಧ್ಯಾತ್ಮಿಕ ಕೇಂದ್ರಗಳಿದ್ದಂತೆ. ಇಲ್ಲಿ ಮನುಷ್ಯರನ್ನು ಅನಾಮಿಕವಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಇನ್ನು ಸಾಹಿತ್ಯ ಕೂಡ ಎಲ್ಲವನ್ನು ಅನಾಮಿಕವಾಗಿ ಅರ್ಥಮಾಡಿಕೊಳ್ಳುತ್ತದೆ. ಪರಿಹಾರವನ್ನು ನೀಡುತ್ತದೆ ಎಂದರು. ಜೀವನದಲ್ಲಿ ಬರುವ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಸಾಹಿತ್ಯ ಕಲಿಸುತ್ತದೆ. ಬಿಎ, ಎಂಎ, ಎಂಬಿಬಿಎಸ್, ಬಿಇಡಿ ಸೇರಿದಂತೆ ಎಲ್ಲ ಕೋರ್ಸ್‌ಗಳಲ್ಲಿ ಕಲಿಯುವ ಪಾಠಗಳು ತರಗತಿಯ ಪರೀಕ್ಷೆಗಳನ್ನು ಮಾತ್ರ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸುತ್ತವೆಯೇ ಹೊರತು ಜೀವನದ ಪಾಠ ಮಾಡುವುದಿಲ್ಲ. ಜೀವನದ ಪಾಠ ಕಲಿಯಲು ಸಾಹಿತ್ಯ ಓದಬೇಕು. ಒಳ್ಳೆಯ ಸಿನಿಮಾ, ನಾಟಕಗಳನ್ನು ನೋಡಬೇಕು. ಜನರ ಮಧ್ಯೆ ಬೆರೆಯಬೇಕು ಎಂದು ತಿಳಿಸಿದರು.

ಕುವೆಂಪು, ಬೇಂದ್ರೆ, ಮಾಸ್ತಿ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ನೂರಾರು ಕವಿಗಳಿದ್ದಾರೆ. ಅವರ ಒಂದೊಂದು ಪುಸ್ತಕಗಳನ್ನು ಓದಿದರೂ ಜೀವನದ ಪಾಠ ತಿಳಿಯಲಿದೆ .ಇತ್ತೀಚಿಗೆ ಕುವೆಂಪು, ಗಾಂಧಿ ಅವರ ಬಗ್ಗೆ ಓದಿಕೊಳ್ಳದೆ ಅವರ ಬಗ್ಗೆ ಮಾತನಾಡುವ ತೆಗಳುವ ಪ್ರಕ್ರಿಯೆ ನಡೆಯುತ್ತಿದೆ ಇದು ಶೋಚನೀಯ ಹಾಗೂ ಯೋಚನೀಯವಾದದ್ದು ಎಂದರು.

ನಾಟಕ, ಸಿನಿಮಾ, ನೃತ್ಯಗಳನ್ನು ಎಲ್ಲರೂ ಒಟ್ಟಿಗೆ ಕುಳಿತು ನೋಡಿದರೆ ಮಾತ್ರ ಅವು ಕಲೆಯಾಗುತ್ತವೆ.  ಆದರೆ, ಇಂದಿನ ಯುವ ಸಮುದಾಯ ವಾಟ್ಸಾಪ್, ಫೆಸ್‌ಬುಕ್‌ನಲ್ಲಿ ಮುಳುಗಿ ಸ್ವತಂತ್ರ ಚಿಂತನೆಯನ್ನು ಮರೆಯುತ್ತಿದೆ. ವಾಟ್ಸಾಪ್‌ನಲ್ಲಿ ಯಾರೋ ಕಳುಹಿಸಿದ ಸುದ್ದಿಯನ್ನು ನೂರು ಜನರಿಗೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಧಾಮಣಿ, ಸಂಚಾಲಕ ಡಾ.ಸಿ.ರವೀಂದ್ರನಾಥ್, ದಿಲೀಪ್ ನವಿಲೇಹಾಳ್ ಮತ್ತಿತರರು ಉಪಸ್ಥಿತರಿದ್ದರು.

 

 

 

 

Leave a Reply

comments

Related Articles

error: