ಮೈಸೂರು

ಪರಿಸರ ಉಳಿಸಿ : ಅರಿವು ಜಾಥಾ

ಮೈಸೂರು ಪೋಲಿಸ್ ಇಲಾಖೆಯ ವತಿಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಿಗೆ ಕರ್ಕಶ ಶಬ್ದ ಹಾಗೂ ಶಬ್ದ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಶನಿವಾರ ನಡೆದ ಜಾಥಾದಲ್ಲಿ ಪಾಲ್ಗೊಂಡ ಎಸ್ಸೈ ರಮೇಶ್ ಮಾತನಾಡಿ, ಇಂದಿನ ಯುವಕರು ಹಣ ದುಂದು ವೆಚ್ಚ ಮಾಡುತ್ತಾರೆ. ಮೋಜಿಗಾಗಿ ತಮ್ಮ ಬೈಕ್ ನ ಸೈಲೆನ್ಸರ್ ಅನ್ನು ಬದಲಾಯಿಸಿ ಅತಿ ಹೆಚ್ಚು ಶಬ್ದ ಮಾಡುವ ಮೂಲಕ ಮಾಲಿನ್ಯ ಮಾಡುತ್ತಾರೆ. ಪೋಷಕರು ಚಾಲನಾ ತರಬೇತಿಯನ್ನು ಪಡೆದ ನಂತರ ಮಕ್ಕಳಿಗೆ ವಾಹನ ಕೊಡಿಸಬೇಕು, ಕುಡಿದು ವಾಹನವನ್ನು ಚಾಲನೆ ಮಾಡಬಾರದು, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು, ಕೆಲವು ವೃತ್ತಗಳ ಸಿಗ್ನಲ್ ಬಳಿ ಇರುವ ಜಿಬ್ರಾ ಕ್ರಾಸ್ ಮೇಲೆ ವಾಹನಗಳನ್ನು ನಿಲ್ಲಿಸಬಾರದು. ತಮ್ಮ ವಾಹನದ ಇನ್ಶೂರೆನ್ಸ್ ಅನ್ನು ಕಡ್ಡಾಯವಾಗಿ ಕಟ್ಟಿರಲೇಬೇಕು ಎಂದರು. ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಜನರು ಈ ವರ್ಷ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿ ವರ್ಗ ಎಲ್ಲ ವೃತ್ತಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ. ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತವನ್ನು ತಡೆಗಟ್ಟಿ ನಿಮ್ಮ ಅಮೂಲ್ಯವಾದ ಜೀವ ಉಳಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭ ಎಎಸ್ಸೈಗಳಾದ ರಮೇಶ್‌, ಭವ್ಯ, ರಾಮಚಂದ್ರ, ಬಿ.ಜೆ.ಪಿ ಮುಖಂಡ ಜೋಗಿ ಮಂಜು, ಕಾಂಗ್ರೆಸ್ ಮುಖಂಡ ನಾಸಿರ್, ಪ್ರಶಾಂತ್, ಸ್ವಾಮಿ, ಚಂದ್ರು, ಜಗನ್ನಾಥ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ಜಾಥಾವು ರಾಮಸ್ವಾಮಿ ವೃತ್ತ, ಸಿದ್ದಪ್ಪ ವೃತ್ತ, ಅಗ್ರಹಾರ ವೃತ್ತ, ಗನ್‌ ಹೌಸ್ ವೃತ್ತ, ಬಸವೇಶ್ವರ ವೃತ್ತ, ತಾತಯ್ಯ ವೃತ್ತ, ನಂಜು ಮಳಿಗೆ ವೃತ್ತಗಳಲ್ಲಿ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.

Leave a Reply

comments

Related Articles

error: