
ದೇಶಪ್ರಮುಖ ಸುದ್ದಿ
ರಿಸರ್ವ್ ಬ್ಯಾಂಕ್ ಗವರ್ಗರ್ ಊರ್ಜಿತ್ ರಾಜೀನಾಮೆ ಸಾಧ್ಯತೆ?
ಬೆಂಗಳೂರು (ಅ.31): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ವಿವಾದದ ಕಂದಕ ದೊಡ್ಡದಾಗುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಒಂದು ಮೂಲ ತಿಳಿಸಿದೆ.
ಆದರೆ, ರಿಸರ್ವ್ ಬ್ಯಾಂಕ್ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರ ಪ್ರಕಾರ, ದೀಢೀರನೆ ಊರ್ಜಿತ್ ಪಟೇಲ್ ಅವರು ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕಡಿಮೆ. ಊರ್ಜಿತ್ ಪಟೇಲ್ ತಕ್ಷಣ ರಾಜೀನಾಮೆ ನೀಡುವ ಸಾಧ್ಯತೆಯನ್ನು ಆ ಅಧಿಕಾರಿ ತಳ್ಳಿಹಾಕಿದ್ದಾರೆ.
ಊರ್ಜಿತ್ ಪಟೇಲ್ ಅವರೂ ಭಾಗಿಯಾಗಿದ್ದ, ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೆಂಟ್ರಲ್ ಬ್ಯಾಂಕ್ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ಅವರು ರಾಜೀನಾಮೆ ಸಲ್ಲಿಸಬಹುದು ಎಂಬ ಗಾಳಿಸುದ್ದಿ ಹಬ್ಬಿದೆ. “ಕೇಂದ್ರ ಸರಕಾರ ತನ್ನ ಸ್ವಾತಂತ್ರ್ಯ ಕಸಿದುಕೊಂಡಿದ್ದು, ಸ್ವಾಯತ್ತತೆಗೆ ಧಕ್ಕೆ ತಂದಿದೆ. ಹೀಗಾದರೆ ಭಾರತದ ಅರ್ಥ ವ್ಯವಸ್ಥೆಗೆ ಬೆಂಕಿ ಬೀಳಲಿದೆ, ಹಣಕಾಸು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಲಿದೆ” ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಆರೋಪಿಸಿದೆ.
ಈ ಎಲ್ಲ ಬೆಳವಣಿಗೆಗಳಿಂದ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ದ್ವಾರಗಳೂ ಮುಕ್ತವಾಗಿದ್ದು, ಏನು ಬೇಕಾದರೂ ಸಂಭವಿಸಬಹುದು ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಅಲ್ಲದೆ, ಊರ್ಜಿತ್ ಅವರ ಸೇವಾವಧಿ ಮುಂದಿನ ಸೆಪ್ಟೆಂಬರ್ ವರೆಗೆ ಇರಲಿದ್ದು, ಅವರನ್ನು ಅಲ್ಲಿಯವರೆಗೆ ಮುಂದುವರಿಸುವ ಸಾಧ್ಯತೆ ಕಡಿಮೆ ಎಂಬ ಮಾತು ಕೂಡ ಕೇಳಿಬಂದಿದೆ. ಇದನ್ನು ತಪ್ಪಿಸಲೆಂದೇ ಊರ್ಜಿತ್ ಅವರು ಸೇವಾವಾಧಿ ಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಸಬಹುದು ಎಂಬ ವದಂತಿ ಹಬ್ಬಿದೆ. (ಎನ್.ಬಿ)