ಮೈಸೂರು

ಕುವೆಂಪು ಮಾನವೀಯತೆ ಸಾರಿದ ಮಹಾನ್ ಕವಿ : ಮರಿತಿಬ್ಬೇಗೌಡ ಬಣ್ಣನೆ

ರಾಷ್ಟ್ರಕವಿ ಕುವೆಂಪು ಹಾಗೂ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಸಮಾಜಕ್ಕೆ ಶಾಂತಿ, ಸಂಸ್ಕಾರ, ಮಾನವೀಯತೆ ಹಾಗೂ ಸಮಾನತೆಯನ್ನು ಸಾರಿದ ಮಹಾ ಯತಿಗಳು ಎಂದು ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರಿನ  ಕೆ.ಜಿ.ಕೊಪ್ಪಲಿನ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಆಯೋಜಿಸಿದ್ದ ಬಿಜಿಎಸ್ ಒಕ್ಕಲಿಗ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವನ್ನು ಮರಿತಿಬ್ಬೇಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕುವೆಂಪು ತಮ್ಮ ಜೀವಮಾನವನ್ನೆಲ್ಲಾ ಸಾಹಿತ್ಯ ಕ್ಷೇತ್ರಕ್ಕೆ ಮುಡಿಪಾಗಿಟ್ಟವರು. ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ತಮ್ಮ ಉನ್ನತ ಧ್ಯೇಯೋದ್ದೇಶಗಳನ್ನು ಮನುಕುಲಕ್ಕೆ ತೋರಿಸಿಕೊಟ್ಟ ಮಹಾನ್ ಕವಿ. ಸಾಹಿತ್ಯ ಕ್ಷೇತ್ರದಲ್ಲಿನ ಇತರ ಲೇಖಕ ಹಾಗೂ ಕವಿಗಳಿಗೂ, ಕುವೆಂಪು ಅವರಿಗೂ  ಬಹಳ ವ್ಯತ್ಯಾಸವಿದ್ದು, ಎತ್ತರದ ಸ್ಥಾನದಲ್ಲಿ ನಿಲ್ಲುವಂತಹ ಮಹಾನ್ ವ್ಯಕ್ತಿತ್ವ ಉಳ್ಳವರು ಕುವೆಂಪು ಎಂದು ಬಣ್ಣಿಸಿದರು.

ಮನುಜ ಮತ ವಿಶ್ವಪಥ ಎಂದು ವಿಶ್ವಮಾನವ ಸಂದೇಶದ ಮೂಲಕ ಎಲ್ಲರೂ ಒಂದೇ ಎಂಬ ಭಾವನೆಯನ್ನು ಎಲ್ಲರ ಮನಸ್ಸಿನಲ್ಲೂ ಬಿತ್ತಲು ಪ್ರಯತ್ನಿಸಿದರು. ಪ್ರಕೃತಿಯ ಮುಂದೆ ಮಾನವ ತರಗೆಲೆ, ಸಮೃದ್ಧವಾದ ಪ್ರಕೃತಿಯಲ್ಲಿ ಬಾಳುವ ನಾವು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಪ್ರಕೃತಿಯ ಮೇಲಿನ ತಮ್ಮ ಅಗಾಧ ಪ್ರೇಮವನ್ನು ಹಲವಾರು ಕೃತಿಗಳಲ್ಲಿ ಸಾರಿ ಹೇಳಿದ್ದಾರೆ. ಸರಳತೆಯ ವ್ಯಕ್ತಿತ್ವ, ಸಜ್ಜನಿಕೆಯ ಸಂಸ್ಕೃತಿಯಿಂದ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಇದೇ ವೇಳೆ ಅಂತಾರಾಷ್ಟ್ರೀಯ ಕ್ರೀಡಾಪಟು ಬಲರಾಮೇಗೌಡ, ಪ್ರಾಚ್ಯವಸ್ತು ಸಂಶೋಧಾನಾಲಯದ ನಿರ್ದೇಶಕಿ ಡಾ.ಹೆಚ್.ಪಿ.ದೇವಕಿ, ಸಂಘದ ಪೋಷಕರಾದ ಆರ್.ನಂಜೇಗೌಡ, ಇಂದಿರಮ್ಮ, ಕೆ.ಎಂ.ಶಕುಂತಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎಂ.ರಾಮು, ಸಾಹಿತಿ ಮಳಲಿ ವಸಂತಕುಮಾತ್, ನೇಗಿಲ ಯೋಗಿ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: