
ಮೈಸೂರು
ಬ್ಯಾಂಕ್ ನಿಂದ ಎಸಿ ಹಣ ಲೂಟಿ : ಆರೋಪಿಗಳ ಬಂಧನ
ಮಹಿಳೆಯೋರ್ವರು ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಉಪವಿಭಾಗಾಧಿಕಾರಿ ಹಣವನ್ನೇ ಲಪಟಾಯಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ಆನಂದ್ ದೂರು ನೀಡಿದ್ದರು. ಪ್ರಕರಣ ಕುರಿತಂತೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಡಿ.ಗ್ರೂಪ್ ನೌಕರ ವೆಂಕಟೇಶ್ ಹಾಗೂ ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಉಪವಿಭಾಗಾಧಿಕಾರಿ ಆನಂದ್ ಅವರು ಮೈಸೂರು ವಿವಿ ಎಸ್.ಬಿ.ಎಂ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಶಾಖೆಯಿಂದ ಚೆಕ್ ಪುಸ್ತಕವನ್ನು ಪಡೆದಿದ್ದರು ಎನ್ನಲಾಗಿದೆ. ಅದರಲ್ಲಿನ ಚೆಕ್ ಹಾಳೆಯ ಸಂಖ್ಯೆಯ ಮೂಲಕ ಜಯಲಕ್ಷ್ಮಿ ವಿವಿ ಶಾಖೆಯಿಂದ ತಮ್ಮ ಎಸ್.ಬಿ.ಎಂ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದರು.
ಇದಾದ ಬಳಿಕ ಆನಂದ್ ಅವರು ತಮ್ಮ ಬ್ಯಾಂಕ್ ಪಾಸ್ ಬುಕ್ ಪರಿಶೀಲಿಸಿದ ವೇಳೆ ಮಹಿಳೆಯ ಹೆಸರಿಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿತ್ತು. ಕೂಡಲೇ ಅವರು ಲಕ್ಷ್ಮಿಪುರಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಇನ್ಸ್’ಪೆಕ್ಟರ್ ಸಿದ್ದರಾಜು ತನಿಖೆಯನ್ನು ಆರಂಭಿಸಿದ್ದರು. ತನಿಖೆಯ ವೇಳೆ ವಿಷಯ ಬಹಿರಂಗಗೊಂಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಂಗ ವಶಕ್ಕೆ ಒಪ್ಪಿಸಿದ್ದಾರೆ.