ಮೈಸೂರು

ಸಮಾನತೆಯ ಹಕ್ಕು ಯಾರ ಸ್ವತ್ತಲ್ಲ : ಡಾ. ಜ್ಯೋತಿಶಂಕರ್ ಅಭಿಮತ

ಹೆಣ್ಣಿಗೆ ಬೇಕಾದ ಸಮಾನತೆಯ ಹಕ್ಕು ಯಾರ ಸ್ವತ್ತಲ್ಲ. ಅದನ್ನು ಮತ್ತೊಬ್ಬರು ನೀಡಬೇಕಾದ ಅಗತ್ಯವೂ ಇಲ್ಲ ಹಾಗೂ ನೀಡುವ ವಸ್ತುವೂ ಅಲ್ಲ. ತನ್ನ ಸಾಧನೆಯಿಂದ, ಸುಂದರ ಬದುಕಿನ ನಿರ್ವಹಣೆಯಿಂದ, ಸುಖ ಸಂಸಾರ ರೂಪಿಸಿಕೊಳ್ಳುವ ಕುಶಲತೆಯಿಂದ ಸಮಾನತೆಯ ಹಕ್ಕನ್ನು ಸಂಪಾದಿಸಿಕೊಳ್ಳಬಲ್ಲಳು ಎಂದು  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜ್ಯೋತಿಶಂಕರ್  ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ  ಘಟಕದ  ಆಶ್ರಯದಲ್ಲಿ ಬಿ.ಎನ್ ರಸ್ತೆಯಲ್ಲಿರುವ  ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮಹಿಳಾ ಪ್ರಸಾದ ನಿಲಯದಲ್ಲಿ ನಡೆದ ‘ಸ್ತ್ರೀ ಸಮಾನತೆಯ ಹಕ್ಕು ಸುಖ ಸಂಸಾರಕ್ಕೆ ದಾರಿ’ ಎಂಬ ವಿಷಯ ಕುರಿತ ಚರ್ಚಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ವಚನಕಾರರ ಜೀವನ ಕ್ರಮ, ವೇದಕಾಲದ ಸಮಾಜ, ಹೆಣ್ಣು ಮಕ್ಕಳಿಗೆ ನೀಡಿದ್ದ ಗೌರವಾದರಗಳು, ಪ್ರಸ್ತುತ ಜೀವನ ಕ್ರಮದಲ್ಲಿ ಹೆಣ್ಣು ಮಕ್ಕಳು ಮಾಡುತ್ತಿರುವ ಸಾಧನೆಗಳು ಸ್ತ್ರೀ ತನ್ನ ಬದುಕನ್ನು ತಾನೆ ಕಟ್ಟಿಕೊಳ್ಳಬೇಕೆಂಬುದನ್ನು ತಿಳಿಸುತ್ತವೆ  ಎಂದರು

ಕಾರ್ಯಕ್ರಮವನ್ನು  ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಭಾರತೀಯ ಸಮಾಜದಲ್ಲಿ ಹೆಣ್ಣಿಗೆ ಅತಿ ಮುಖ್ಯ ಸ್ಥಾನವಿದೆ. ಭಾರತದ ಇತಿಹಾಸ ಮತ್ತು ಪರಂಪರೆಯನ್ನು ಅವಲೋಕಿಸಿದಾಗ ಇದು ವೇದ್ಯವಾಗುತ್ತದೆ. ಅಂತೆಯೇ ಸ್ತ್ರೀ ಎಂಬ ಕಾರಣದಿಂದಲೇ ಶೋಷಣೆಗಳೂ ನಡೆದಿವೆ.  ಶೋಷಣೆಯನ್ನು ಕೊನೆಗಾಣಿಸುವ ಸಲುವಾಗಿ  ನಮ್ಮ ಸಂವಿಧಾನ ಆಕೆಗೆ ಅತೀ ಮುಖ್ಯವಾದ ಹಕ್ಕುಗಳನ್ನು ನೀಡಿದೆ. ಆದರೆ ಅವುಗಳ ಕುರಿತು ಕೆಲವರಿಗೆ ಅರಿವಿಲ್ಲ ಮತ್ತು ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಈ ವಿಷಯದ ಕುರಿತು ಜಾಗೃತಿ ಮೂಡಬೇಕು.  ಸಂಸಾರ ನಿರ್ವಹಣೆಯಲ್ಲಿ ಹೆಣ್ಣು ಮತ್ತು ಗಂಡುಗಳೀರ್ವರೂ ಮುಖ್ಯ. ಪರಸ್ಪರರಲ್ಲಿ  ಹಕ್ಕಿನ ಪ್ರತಿಪಾದನೆ ಶೋಷಣೆಯಲ್ಲಿ ನಡೆಯುತ್ತಿದೆ. ಸ್ತ್ರೀಗೂ ಸಮಾನತೆಯ ಹಕ್ಕಿರಲಿ, ಅಂತೆಯೇ ಪುರುಷನಿಗೂ ಮಾನ್ಯತೆ ಸಿಗಲಿ ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್ ಶಿವಕುಮಾರಸ್ವಾಮಿ ಮಾತನಾಡಿ ಹೆಣ್ಣು ಸಂಸಾರದ ಕಣ್ಣು. ಹೆಣ್ಣಿನಿಂದಲೇ ಇಹವು, ಹೆಣ್ಣಿನಿಂದಲೇ ಪರವು, ಹೆಣ್ಣಿನಿಂದಲೇ ಸಕಲ ಸಂಪದವು ಎಂದು ನಮ್ಮ ಭಾರತೀಯ ಸಮಾಜ ಭಾವಿಸುತ್ತದೆ. ಹೆಣ್ಣಿಗೆ ನೀಡಿರುವ ಈ ಪ್ರಾಮುಖ್ಯತೆಯನ್ನು ಹೆಣ್ಣು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪವಹಿಸಿದ್ದರು. ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಎಂ.ಎ. ವಿದ್ಯಾರ್ಥಿನಿ ಸಿಂಧು ಪ್ರಥಮ, ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಅದಿತಿ ದ್ವಿತೀಯ ಮತ್ತು ಪ್ರಥಮ ಬಿ.ವೊಕ್ ವಿದ್ಯಾರ್ಥಿನಿ ಛಾಯಾ ತೃತೀಯ ಬಹುಮಾನ ಪಡೆದು ಬಹುಮಾನ ಸ್ವೀಕರಿಸಿದರು.

Leave a Reply

comments

Related Articles

error: