ಪ್ರಮುಖ ಸುದ್ದಿ

ವಿರಾಜಪೇಟೆ ಪೊಲೀಸರ ವಿರುದ್ಧ ಅಸಮಾಧಾನ : ನ.7 ರಂದು ಬಿಜೆಪಿ ಪ್ರತಿಭಟನೆ

ರಾಜ್ಯ(ಮಡಿಕೇರಿ) ನ.2 :- ವಿರಾಜಪೇಟೆ ತಾಲೂಕಿನ ಕೆಲವು ಪೊಲೀಸ್ ಅಧಿಕಾರಿಗಳು ಪ.ಪಂ ಚುನಾವಣೆ ಸಂದರ್ಭ ಪಕ್ಷಪಾತ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿರುವ ವೀರಾಜಪೇಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕುಂಞಗಡ ಅರುಣ್ ಭೀಮಯ್ಯ ವೀರಾಜಪೇಟೆ ಡಿವೈಎಸ್‍ಪಿ ಕಛೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಪಂ ಚುನಾವಣಾ ಹಂತದಲ್ಲಿ ಬಿಜೆಪಿ ಪ್ರಮುಖರ ಮೇಲೆ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳದಿದ್ದಲ್ಲಿ, ನ.7 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ವೀರಾಜಪೇಟೆ ಡಿವೈಎಸ್‍ಪಿ ಹಾಗೂ ನಗರ ಠಾಣಾಧಿಕಾರಿ ವರ್ತನೆಯನ್ನು ಖಂಡಿಸಿ, ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಕಳೆದ ಅ.26 ರಂದು ರಾತ್ರಿ ಬಿಜೆಪಿ ಪ್ರಮುಖ ಸಜೀವ ಅವರ ಮೇಲೆ ವೀರಾಜಪೇಟೆಯಲ್ಲಿ ಐವರು ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸಜೀವ ಅವರು ಠಾಣೆಯಲ್ಲಿ ದೂರು ನೀಡಲು ಮುಂದಾದ ಸಂದರ್ಭ ಸೆಕ್ಷನ್ 307 ರಂತೆ ದೂರು ನೀಡಬಾರದೆಂದು ಅಧಿಕಾರಿಗಳು ಬೆದರಿಕೆ ಹಾಕಿರುವುದಾಗಿ ಅರುಣ್ ಭೀಮಯ್ಯ ಆರೋಪಿಸಿದರು.

ಇದೇ ರೀತಿ ಅ.31 ರಂದು ವೀರಾಜಪೇಟೆ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಶಕೀಲ್ ಅವರ ಮೇಲೆ ಹಲ್ಲೆ ನಡೆದಿದ್ದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಇಂದು ಬೆಳಗ್ಗೆ ನಗರ ಬಿಜೆಪಿ ಮಾಜಿ ಅಧ್ಯಕ್ಷ ಕುಮಾರ್ ಅವರಿಗೂ ಬೆದರಿಕೆ ಹಾಕಲಾಗಿದೆ. ಕುಮಾರ್ ಅವರ ಪತ್ನಿಯ ವಿರುದ್ಧ ಸ್ಪರ್ಧಿಸಿ ಸೋತ ಅಭ್ಯರ್ಥಿಯ ಕಡೆಯವರಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದ ಅರುಣ್ ಭೀಮಯ್ಯ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ವೀರಾಜಪೇಟೆ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ನಗರದಲ್ಲಿ ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದೆ. ಚುನಾವಣಾ ಹಂತದಲ್ಲಿ ಯಾವುದೇ ದುಷ್ಕೃತ್ಯಗಳು ಸಂಭವಿಸಿದರೆ ಸಂಬಂಧ ಪಟ್ಟ ಆರೋಪಿಗಳಿಗೆ ಠಾಣೆಯಲ್ಲಿ ಜಾಮೀನು ನೀಡುವಂತಿಲ್ಲ. ಬದಲಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಆದರೆ, ವೀರಾಜಪೇಟೆಯಲ್ಲಿ ಇಂತಹ ನಿಯಮಗಳನ್ನು ಮೀರಿ ಆರೋಪಿಗಳಿಗೆ ರಕ್ಷಣೆ ನೀಡುವ ಕಾರ್ಯ ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿಗೆ ಅಧಿಕಾರ

ವೀರಾಜಪೇಟೆ ಪ.ಪಂಚಾಯತ್ ನ 18 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿಯು ಆಡಳಿತಕ್ಕೆ ಬರುವ ವಿಶ್ವಾಸವಿದೆ. ಶಾಸಕ, ಸಂಸದರ ಬೆಂಬಲದೊಂದಿಗೆ ಪ.ಪಂ ಬಿಜೆಪಿ 10 ಸ್ಥಾನಗಳನ್ನು ಪಡೆಯಲಿದ್ದು, ಆಡಳಿತಕ್ಕೆ ಅವಶ್ಯವಿರುವ ಮತ್ತೊಂದು ಸ್ಥಾನದ ಬೆಂಬಲವನ್ನು ಪಕ್ಷೇತರರ ಮೂಲಕ ಪಡೆಯುವ ಪ್ರಯತ್ನ ಮಾಡಲಾಗುವುದೆಂದು ಅರುಣ್ ಭೀಮಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಘು ನಾಣಯ್ಯ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಸದಸ್ಯ ಇ.ಸಿ. ಜೀವನ್, ಎಪಿಎಂಸಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ವೀರಾಜಪೇಟೆ ನಗರಾಧ್ಯಕ್ಷ ಅನಿಲ್ ಮಂದಣ್ಣ, ಜಿ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: