ಮೈಸೂರು

ಕನ್ನಡ ಭಾಷೆಯಲ್ಲಿರುವ ವಚನ ಸಾಹಿತ್ಯ ಇಂದು ಎಲ್ಲಾಭಾಷೆಗೂ ಭಾಷಾಂತರಗೊಳ್ಳುತ್ತಿದೆ : ಡಾ.ಕೆಂಡಗಣ್ಣಗೌಡ

ಮೈಸೂರು, ನ.3:- ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ 63ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಮೊದಲಿಗೆ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಪೂಜೆಯನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿ ಕನ್ನಡ ಮಾತೆಗೆ ಗೌರವವನ್ನು ಸಲ್ಲಿಸಿದರು. ನಿರೂಪಣೆಯನ್ನು ಶಾಲೆಯ ಕನ್ನಡ ಶಿಕ್ಷಕಿ ಸುನೀತಾರವರು ಕವಿಗಳ ಕಾವ್ಯದ ಸಾಲುಗಳನ್ನು ಹೇಳುತ್ತಾ ಕಾರ್ಯಕ್ರಮಕ್ಕೆ ಒಂದು ಸೊಬಗನ್ನು ತಂದರು. ತದನಂತರ ಎಲ್‍ಕೆಜಿ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಬಹಳ ಸುಶ್ರಾವ್ಯವಾಗಿ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾರಾಣಿ ಕಾಲೇಜಿನ ಅಧ್ಯಾಪಕರಾದ ಡಾ.ಕೆಂಡಗಣ್ಣಗೌಡ ಅವರು ಮಾತನಾಡಿ,  ಕನ್ನಡ ನಾಡು, ನುಡಿಯ ಬಗ್ಗೆ ಸವಿವರವಾಗಿ ತಿಳಿಸಿದರು. ಕೇವಲ ನವೆಂಬರ್ ತಿಂಗಳಲ್ಲಿ ಕನ್ನಡಿಗರಾಗಿರುವುದು ಬೇಡ. ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಓದುವುದರ ಮೂಲಕ ಕನ್ನಡಾಭಿಮಾನವನ್ನು ಬೆಳೆಸಬೇಕೆಂದು ಕರೆ ನೀಡಿದರು. 1956, ನವೆಂಬರ್ 1ರಂದು ವಿಜಯನಗರದ ಹಂಪೆಯಲ್ಲಿ ಪ್ರಪ್ರಥಮ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಎಂಬುದಾಗಿ ತಿಳಿಸಿದರು. ಅಂದಿನ ದಿನ ಮೊದಲ ಕನ್ನಡ ರಾಜ್ಯೋತ್ಸವದ ಉದ್ಘಾಟನೆಯನ್ನು ಆಲೂರು ವೆಂಕಟರಾಯರು ನೆರವೇರಿಸಿದ್ದರು ಎಂಬುದನ್ನು ನೆನಪಿಸಿಕೊಂಡರು. ನವೋದಯ ಕವಿಗಳು ಹಾಗೂ ಕನ್ನಡದ ರಾಷ್ಟ್ರಕವಿಗಳಾದ ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪರವರ ಬಗ್ಗೆ ತಿಳಿಸಿದರು. ನಮ್ಮ ರಾಷ್ಟ್ರಭಾಷೆಯಾದ ಹಿಂದಿ ಹಲವಾರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದೆ. ಅದರಂತೆ ನಮ್ಮ ಕನ್ನಡ ಭಾಷೆಯೂ ಕೂಡ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಇತಿಹಾಸವನ್ನು ಸೃಷ್ಟಿಸಿದೆ. ನಮ್ಮ ಕನ್ನಡ ಭಾಷೆಯಲ್ಲಿರುವ ವಚನ ಸಾಹಿತ್ಯ ಇಂದು ಎಲ್ಲಾಭಾಷೆಗೂ ಭಾಷಾಂತರಗೊಳ್ಳುತ್ತಿದೆ. ಈ ವಿಚಾರ ಕನ್ನಡಿಗರಿಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಟಿ.ರಂಗಪ್ಪ  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಾವು ಯಾವುದೇ ಸಾಧನೆಯನ್ನು ಮಾಡಬೇಕಾದರೂ ಪರಿಶ್ರಮ ಅತ್ಯಗತ್ಯ. ವಿದ್ಯಾರ್ಥಿಗಳು ಇದನ್ನು ಮನಗಾಣಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ವಿದ್ಯಾರ್ಥಿಗಳು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಲವಾರು ಮಹಾನ್ ವ್ಯಕ್ತಿಗಳು ತಮ್ಮಲ್ಲಿರುವಂತಹ ವಿವೇಚನೆ, ಜ್ಞಾನವನ್ನು ನಮಗೆ ಗ್ರಂಥಗಳ ಮೂಲಕ, ಕಾವ್ಯಗಳ ಮೂಲಕ ತಿಳಿಸಿದ್ದಾರೆ. ಅವರ ಆದರ್ಶ ವ್ಯಕ್ತಿತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ಜೀವನವನ್ನು ಸಾಗಿಸಲು ಹಲವಾರು ಭಾಷೆಗಳನ್ನು ಕಲಿಯಬೇಕು. ಆದರೆ ನಮ್ಮ ತಾಯಿ ಭಾಷೆಯಾದ ಕನ್ನಡವನ್ನು ಮರೆಯಬಾರದು. ಈ ನಾಡಿನಲ್ಲಿ ಹುಟ್ಟಿದ್ದಕ್ಕೆ ನಮ್ಮ ಜನ್ಮ ಸಾರ್ಥಕವಾಯಿತು. ಹಾಗಾಗಿ ಈ ನಾಡಿನ ಏಳಿಗೆಗಾಗಿ ದುಡಿಯಬೇಕು. ಕನ್ನಡವನ್ನು ಪ್ರೀತಿಸಿ, ಗೌರವಿಸಿ, ಆರಾಧಿಸಿ ಇಂದಿಗೂ, ಎಂದಿಗೂ, ಎಂದೆಂದಿಗೂ, ಕನ್ನಡ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಸಂಯೋಜನಾಧಿಕಾರಿ ಕಾಂತಿನಾಯಕ್, ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಶಾಲಾ ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್ ಉಪಸ್ಥಿರಿದ್ದರು.

ಶಿಕ್ಷಕಿ ಶೈಲಜ ಸ್ವಾಗತ ಕೋರಿದರು. ಎಂಇಡಿ ಪ್ರಶಿಕ್ಷಣಾರ್ಥಿಯಾದ ಶಿವಕುಮಾರ್ ವಂದಿಸಿದರು. ಬಳಿಕ ಸಾಮಸ್ಕೃತಿಕ ಕಾರ್ಯಕ್ರಮ ನಡೆಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: