ದೇಶಪ್ರಮುಖ ಸುದ್ದಿವಿದೇಶ

ಸಿಂಧೂ ನದಿ ಜಲ ಹಂಚಿಕೆ ವಿವಾದ: ಪಾಕಿಸ್ತಾನಕ್ಕೆ ಕೆರ್ರಿ ಸಹಾಯದ ಭರವಸೆ

ಇಸ್ಲಾಮಾಬಾದ್: ಭಾರತವು ಸಿಂಧೂ ನದಿ ಜಲ ಹಂಚಿಕೆ ಒಪ್ಪಂದವನ್ನು ಏಕಪಕ್ಷೀಯವಾಗಿ ಮುರಿಯದಂತೆ ತನಗೆ ನೆರವಾಗಬೇಕೆಂದು ಪಾಕಿಸ್ತಾನವು ಅಮೆರಿಕಕ್ಕೆ ಮನವಿ ಮಾಡಿದೆ.

ಪಾಕಿಸ್ತಾನದ ಹಣಕಾಸು ಸಚಿವ ಐಶಾಕ್ ದಾರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‍ ಕೆರ್ರಿ ಅವರು ಗುರುವಾರ ದೂರವಾಣಿ ಸಂಭಾಷಣೆ ನಡೆಸಿದ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ್ದು, “ವಿಶ್ವಬ್ಯಾಂಕ್ ಅಧ್ಯಕ್ಷರು ಭಾರತದ ವಿರುದ್ಧ ಪಾಕಿಸ್ತಾನ ನೀಡಿರುವ ದೂರಿನ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದಾರೆ. ಅಮೆರಿಕವು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವತ್ತ ದೃಷ್ಟಿ ನೆಟ್ಟಿದೆ. ಭಾರತ ಮತ್ತು ಪಾಕಿಸ್ತಾನದ ಜೊತೆ ಈ ಕುರಿತು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸುತ್ತೇವೆ” ಎಂದು ಕೆರ್ರಿ ತಿಳಿಸಿದ್ದಾರೆ.

” ‘ಇಂಡಸ್ ವಾಟರ್ ಟ್ರೀಟಿ’ ಒಂದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಭಾರತ ಈ ಒಪ್ಪಂದವನ್ನು ಗೌರವಿಸಬೇಕು. ಇದು ಕೋಟ್ಯಂತರ ಪಾಕಿಸ್ತಾನಿ ನಾಗರಿಕರ ಮೂಲಭೂತ ಸೌಲಭ್ಯವಾದ ಕುಡಿಯುವ ನೀರಿನ ವಿಚಾರವಾಗಿದ್ದು, ವಿಶ್ವಬ್ಯಾಂಕ್‍ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ವಿಶ್ವಬ್ಯಾಂಕ್ ನ್ಯಾಯಮಂಡಳಿಗೆ ತಕ್ಷಣ ಅಧ್ಯಕ್ಷರನ್ನು ನೇಮಿಸಿ ಈ ವಿವಾದವನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು” ಎಂದು ಪಾಕಿಸ್ತಾನದ ಸಚಿವ ದಾರ್ ಆಗ್ರಹಿಸಿದ್ದಾರೆ.

ಪಾಕಿಸ್ತಾನದ ಆರ್ಥಿಕ ಚೇತರಿಕೆಯನ್ನು ಪ್ರಶಂಸಿಸಿರುವ ಕೆರ್ರಿ, ದಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ವಿರೋಧ ಪಕ್ಷದ ನಾಯಕರಾಗಿದ್ದ ದಾರ್ ಜತೆಗಿನ ತಮ್ಮ ಒಡನಾಡವನ್ನು ಕೆರ್ರಿ ಇದೇ ವೇಳೆ ಸ್ಮರಿಸಿದರು.

Leave a Reply

comments

Related Articles

error: