ಮೈಸೂರು

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜಾಗೃತರಾಗಿರಲು ಸೂಚನೆ : ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್

ಮೈಸೂರು,ನ.5:- ಮೈಸೂರು ನಗರದಾದ್ಯಂತ 6/11/2018 ರಂದು ನರಕ ಚತುರ್ದಶಿ, 7/11/2018 ರಂದು ಧನಲಕ್ಷ್ಮೀ ಪೂಜೆ ಮತ್ತು 8/11/2018 ರಂದು ಬಲಿಪಾಡ್ಯಮಿ ಹಬ್ಬವನ್ನು ಸಾರ್ವಜನಿಕರು ಆಚರಿಸಲಿದ್ದಾರೆ.  ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಾಗೃತರಾಗಿರಲು ಸಾರ್ವಜನಿಕರಿಗೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಸೂಚನೆ ನೀಡಿದ್ದಾರೆ.

125 ಡೆಸಿಬಲ್(ಎ-1)ಗಿಂತ ಹೆಚ್ಚಿನ ಶಬ್ದವನ್ನು (4 ಮೀಟರ್ ದೂರದಿಂದ) ಉಂಟು ಮಾಡುವ ಪಟಾಕಿಗಳನ್ನು ತಯಾರಿಸುವುದು, ಶೇಖರಿಸುವುದು, ಮಾರಾಟ ಮಾಡುವುದು ಮತ್ತು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.  ರಾತ್ರಿ 10 ಘಂಟೆಯಿಂದ ಬೆಳಿಗ್ಗೆ 6 ಘಂಟೆಯವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಲೈಸೆನ್ಸ್ ಹೊಂದಿದ ವಿಶ್ವಾಸಾರ್ಹ ಮಾರಾಟಗಾರರಿಂದ ಪಟಾಕಿಗಳನ್ನು ಖರೀದಿಸಬೇಕು. ಪಟಾಕಿಗಳನ್ನು ಸುಡುವ ಮುನ್ನ ಅದರ ಹೊದಿಕೆಯ  ಮೇಲೆ ನಮೂದಿಸಿರುವ ಎಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಟಾಕಿಗಳನ್ನು ಉರಿಸಲು ಕ್ಯಾಂಡಲ್ ಅಥವಾ ಉದ್ದನೆಯ ಅಗರ ಬತ್ತಿಗಳನ್ನು ಉಪಯೋಗಿಸಬೇಕು. ಬೆಂಕಿಯನ್ನು ಮೊದಲ ಹಂತದಲ್ಲೇ ಆರಿಸಲು ಯಾವಾಗಲೂ ಕೈಗೆ ಎಟಕುವಂತೆ/ ಸಮೀಪದಲ್ಲಿ ನೀರನ್ನು ಇಟ್ಟುಕೊಳ್ಳಬೇಕು. ಆಕಾಶದಲ್ಲಿ ಸಿಡಿಯುವ ಪಟಾಕಿಗಳು/ರಾಕೆಟ್‍ಗಳನ್ನು ಸುರಕ್ಷಿತವಾಗಿ ಕೆಳಗೆ ಬೀಳಬಹುದಾದ ವಿಸ್ತಾರವಾದ ವಲಯ/ಸ್ಥಳದಲ್ಲಿ ಉಪಯೋಗಿಸಬೇಕು. ಆಕಾಶದಲ್ಲಿ ಸಿಡಿಯುವ ಪಟಾಕಿ/ರಾಕೆಟ್‍ಗಳ ದಾರಿಗೆ ಅಡ್ಡ ಬರಬಹುದಾದ ಎತ್ತರ ಗೋಡೆಗಳು, ಮರಗಳು, ತಂತಿಗಳು ಹಾಗೂ ಒತ್ತೊತ್ತಾಗಿ ಮನೆಗಳಿರುವ ಸ್ಥಳಗಳಲ್ಲಿ  ಹಚ್ಚಬಾರದು. ಪಟಾಕಿಗಳನ್ನು ಹಚ್ಚಿದ ನಂತರ ಅದು ಸುಡದ ಪಕ್ಷದಲ್ಲಿ ಅವುಗಳನ್ನು ವಿಲೇವಾರಿ ಮಾಡಲು ನೀರಿನಲ್ಲಿ ಅದ್ದಬೇಕು. ಪಟಾಕಿಗಳನ್ನು ಕೈಯಲ್ಲಿ ಹಿಡಿದಿರುವಾಗ ಉರಿಸಬೇಡಿ, ಅವನ್ನು ಕೆಳಗಿಟ್ಟು ಹೊತ್ತಿಸಿ ಮತ್ತು ದೂರ ನಡೆಯಿರಿ. ಮಕ್ಕಳು ಪಟಾಕಿಗಳನ್ನು ಸುಡುವಾಗ ಯಾವಾಗಲೂ ಒಬ್ಬರು ವಯಸ್ಕರ ಸಮ್ಮುಖದಲ್ಲಿ ಸುಡಬೇಕು. ಪಟಾಕಿಗಳನ್ನು ಯಾವುದೇ ಪಾತ್ರೆ/ಡಬ್ಬ/ಮುಚ್ಚುವ ವಸ್ತುಗಳಲ್ಲಿ ಹಾಕಿ ಹೊತ್ತಿಸಬಾರದು. ಪಟಾಕಿಗಳನ್ನು ಸಿಡಿಸುವಾಗ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸಿಡಿಸಿದ ಪಟಾಕಿಗಳು/ರಾಕೆಟ್‍ಗಳು ಮನೆಯೊಳಗೆ ಬರದಂತೆ ಎಚ್ಚರ ವಹಿಸಬೇಕು. ಮನೆಯೊಳಗೆ ಯಾವುದೇ ಪಟಾಕಿಗಳನ್ನು ಹಚ್ಚಬೇಡಿ. ಪಟಾಕಿಗಳನ್ನು ಸಾರ್ವಜನಿಕ ದಾರಿ/ವಾಹನಗಳು ಓಡಾಡುವ ದಾರಿಯಲ್ಲಿ ಹಚ್ಚದೆ ಹೊರ ಬಯಲಿನಲ್ಲಿ ಹಚ್ಚಬೇಕು. ಪಟಾಕಿಗಳಿಂದ ಯಾವುದೇ ಪ್ರಯೋಗ ಮಾಡಬೇಡಿ. ಮನೆಗಳಲ್ಲಿ ಸ್ವತ: ಪಟಾಕಿಗಳನ್ನು ತಯಾರು ಮಾಡತಕ್ಕದ್ದಲ್ಲ.

ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ  ಮೈಸೂರು ನಗರದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: