ಕರ್ನಾಟಕಪ್ರಮುಖ ಸುದ್ದಿ

ರೈತರ ದಂಗೆಗೆ ಬೆದರಿಂದ ಎಕ್ಸಿಸ್ ಬ್ಯಾಂಕ್: ಪ್ರಕರಣ ರದ್ದು ಮಾಡಲು ನಿರ್ಧಾರ

ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ ಸೇರಿದಂತೆ ಹಲವು ಕಡೆ ಎಕ್ಸಿಸ್​ ಬ್ಯಾಂಕ್​ಗಳಿಗೆ ರೈತರ ಮುತ್ತಿಗೆ

ಬೆಂಗಳೂರು (ನ.5): ಸಾಲ ಮರುಪಾವತಿ ಮಾಡದ ರೈತರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದ ಖಾಸಗಿ ವಲಯದ ಎಕ್ಸಿಸ್​ ಬ್ಯಾಂಕ್​ ರೈತರ ಹೋರಾಟಕ್ಕೆ ಮಣಿದು ಕೇಸುಗಳನ್ನು ರದ್ದು ಮಾಡಲು ತೀರ್ಮಾನ ಕೈಗೊಂಡಿದೆ.

ಬೆಳಗಾವಿಯ ಏಣಗಿ ಸೇರಿದಂತೆ ಹಲವು ಗ್ರಾಮಗಳ ಸಾಕಷ್ಟು ರೈತರು ಬೈಲಹೊಂಗಲದ ಆಕ್ಸಿಸ್​ ಬ್ಯಾಂಕ್​ನಿಂದ ಕೃಷಿ ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಆಕ್ಸಿಸ್​ ಬ್ಯಾಂಕ್​ ತನ್ನ ಕೋಲ್ಕತಾ ಕೇಂದ್ರ ಕಚೇರಿಯ ಮೂಲಕ 180ಕ್ಕೂ ಹೆಚ್ಚು ರೈತರಿಗೆ ನೋಟಿಸ್​ ಜಾರಿಗೊಳಿಸಿತ್ತು. ಆದರೆ, ರೈತರು ಅದಕ್ಕೆ ಉತ್ತರ ನೀಡಿರಲಿಲ್ಲ.

ಕೊನೆಗೆ ಬ್ಯಾಂಕ್​ ವತಿಯಿಂದ ಕೋಲ್ಕತಾದ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿತ್ತು. ಅದರಂತೆ ವಿಚಾರಣೆಗೆ ಹಾಜರಾಗುವಂತೆ ಐವರು ರೈತರಿಗೆ ನ್ಯಾಯಾಲಯ ನೋಟಿಸ್​ ಜಾರಿಗೊಳಿಸಿತ್ತು. ರೈತರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಾಲಗಾರ ರೈತರನ್ನು ಬಂಧಿಸುವಂತೆ ಕೋಲ್ಕತಾ ನ್ಯಾಯಾಲಯ ಬೆಳಗಾವಿ ಜಿಲ್ಲಾ ಪೊಲೀಸ್​ ಕಚೇರಿಗೆ ಸೂಚನೆ ನೀಡಿತ್ತು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಐವರು ರೈತರಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ಕುರಿತು ಖಾಸಗಿ ವಾಹಿಗಳಲ್ಲಿ ವರದಿಯಾದ ಕಾರಣ ಎಚ್ಚೆತ್ತ ಸಿಎಂ ಕೂಡಲೇ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ, ರೈತರಿಗೆ ತೊಂದರೆ ನೀಡದಂತೆ ಸೂಚನೆ ನೀಡಿದ್ದರು.

ರೈತರ ಹಿತ ಕಾಯುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸಿಎಂ ದೂರವಾಣಿ ಮೂಲಕ ತಾಕೀತು ಮಾಡಿದ್ದರು. ಅದರಂತೆ ಐವರು ರೈತರಿಗೆ ಪೊಲೀಸರಿಂದ ರಕ್ಷಣೆ ದೊರೆಯುವ ಭರವಸೆ ಸಿಕ್ಕಿತ್ತು. ಹೀಗಿರುವಾಗಲೇ, ಅದಾಗಲೇ ನೋಟಿಸ್​ ಪಡೆದಿದ್ದ ಮಿಕ್ಕ 180 ರೈತರು ಇಂದು ಬೈಲಹೊಂಗಲದ ಎಕ್ಸಿಸ್​ ಬ್ಯಾಂಕ್​ ಶಾಖೆ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದರು. ಇದಕ್ಕೆ ರೈತ ಪರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.

ಬೆಳಗ್ಗೆ ರೈತರು ಬ್ಯಾಂಕಿಗೆ ಮುತ್ತಿಗೆ ಹಾಕಿದರು. ಈ ಘಟನೆ ರಾಜ್ಯಾದ್ಯಂತ ಎಕ್ಸಿಸ್​ ಬ್ಯಾಂಕ್​ ವಿರುದ್ಧ ರೈತರು ಸಿಡಿದೇಳುವಂತೆ ಮಾಡಿತು. ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಎಕ್ಸಿಸ್​ ಬ್ಯಾಂಕ್​ನ ಶಾಖೆಗೆ ಮುತ್ತಿಗೆ ಹಾಕಿದರು. ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವುದನ್ನು ಗಮನಿಸಿದ ಎಕ್ಸಿಸ್​ ಬ್ಯಾಂಕ್​ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಹೀಗಾಗಿ ರಾಜ್ಯಾದ್ಯಂತ ವ್ಯಾಪಿಸಿಕೊಳ್ಳುವ ಸಂಭವವಿದ್ದ ರೈತರ ಹೋರಾಟ ಅಂತ್ಯಗೊಂಡಿದೆ. (ಎನ್.ಬಿ)

Leave a Reply

comments

Related Articles

error: