ಪ್ರಮುಖ ಸುದ್ದಿ

ತಾವು ಮಾಡುವ ವೃತ್ತಿಯನ್ನು ಪ್ರೀತಿಸುತ್ತಾ ಗೌರವದೊಂದಿಗೆ ಪ್ರಾಮಾಣಿಕವಾಗಿ ಮಾಡಿದ್ದಲ್ಲಿ ಸಮಾಜ ಕೂಡ ಗೌರವಿಸಲಿದೆ : ಬಿ.ಡಿ. ಮಂಜುನಾಥ್

ರಾಜ್ಯ(ಮಡಿಕೇರಿ)ನ.5:- ಪ್ರತಿಯೊಬ್ಬರೂ ತಾವು ಮಾಡುವ ವೃತ್ತಿಯನ್ನು ಪ್ರೀತಿಸುತ್ತಾ ಗೌರವದೊಂದಿಗೆ ಪ್ರಾಮಾಣಿಕವಾಗಿ ಮಾಡಿದ್ದಲ್ಲಿ ಸಂಸ್ಥೆಯೊಂದಿಗೆ ಸಮಾಜ ಕೂಡ ಅವರನ್ನು ಗೌರವಿಸುತ್ತದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.

ಸೋಮವಾರಪೇಟೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಸಂಘದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತರಾದ ಬಿ.ಎಂ. ಶ್ರೀಧರ್‍ರವರಿಗೆ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು.

ಇಂದಿನ ಯುವ ಜನಾಂಗ ವೇತನದಾಸೆಗಾಗಿ ತಿಂಗಳಿಗೊಂಡು ಸಂಸ್ಥೆಗಳನ್ನು ಬದಲಾಯಿಸುತ್ತಾ ತಮ್ಮ ವೃತ್ತಿ ಜೀವನದಲ್ಲಿ ಅದೆಷ್ಟೋ ಸಂಸ್ಥೆಗಳಲ್ಲಿ ಕೆಲವೇ ತಿಂಗಳು ಸೇವೆ ಸಲ್ಲಿಸುತ್ತಿರುತ್ತಾರೆ. ಆದರೆ ಶ್ರೀಧರ್‍ರವರು ವಿಬಿನ್ನರಾಗಿದ್ದವರು. ಅವರು ಸಂಘದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರಲ್ಲದೆ, ಸಂಘ ಹಾಗೂ ಗ್ರಾಹಕರ ಮಧ್ಯೆ ಬಾಂದವ್ಯದ ಕೊಂಡಿಯಾಗಿ ಸೇವೆ ಸಲ್ಲಿಸಿದವರು. ಅವರ ಸೇವಾವಧಿಯಲ್ಲಿ ಹಿಂಬಡ್ತಿಯಾದಾಗ ಕೂಡ ದೃತಿಗೆಡದೆ ಹಸನ್ಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದುದ್ದು ಅವರ ದೊಡ್ಡಗುಣವನ್ನು ಎತ್ತಿ ತೋರಿಸುತ್ತದೆ ಎಂದರು.

ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ರವೀಂದ್ರ ಹಾಗೂ ಅಧಿಕಾರಿ ಕುಮಾರ್‍ರವರುಗಳು ಮಾತನಾಡಿ, ಶ್ರೀಧರ್‍ರವರು ಸಂಘದಲ್ಲಿ ಸಿಬ್ಬಂದಿಯಾಗಿದ್ದರಾದರೂ, ಎಲ್ಲವನ್ನು ಬಲ್ಲ ಅಧಿಕಾರಿಯಂತೆ ಕಾರ್ಯ ನಿರ್ವಹಿಸಿದವರು. ಸಂಘದಲ್ಲಿ ಏನಾದರೂ ಸಮಸ್ಯೆಗಳು ತಲೆದೋರಿದಲ್ಲಿ ಅದನ್ನು ಸಮರ್ಥ ಪರಿಹರಿಸುವ ನಿಪುಣರಾಗಿದ್ದರು ಎಂದರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಿ.ಎಂ. ಶ್ರೀಧರ್ ಮಾತನಾಡಿ, ತಾನು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಘ ನನಗೆ ಎಲ್ಲವನ್ನೂ ನೀಡಿದೆ. ಈ ಸಂಘಕ್ಕೆ ನನ್ನ ಕುಟುಂಬವೇ ಚಿರಋಣಿಯಾಗಿದೆ ಎಂದರು. ಇಲ್ಲಿ ತನ್ನ ಸೇವಾವಧಿಯಲ್ಲಿ ಸಹಕಾರ ನೀಡಿದವರನ್ನು ಸ್ಮರಿಸಿದರು.

ಸಮಾರಂಭದಲ್ಲಿ ಉಪಾಧ್ಯಕ್ಷ ಕೆ.ಜಿ. ಸುರೇಶ್, ನಿರ್ದೇಶಕರುಗಳಾದ ಅರೆಯೂರು ಜಯಣ್ಣ, ರೂಪ ಸತೀಶ್, ನಳಿನಿ ಗಣೇಶ್, ಸಂಘದ ಲೆಕ್ಕಿಗರಾದ ಪಿ. ಅನಿಲ್‍ಕುಮಾರ್, ಸಿಬ್ಬಂದಿಗಳಾದ ಎಸ್.ಎಲ್. ಚೆನ್ನಕೇಶವ, ಡಿ.ಎಂ. ಅರುಣ್‍ಕುಮಾರ್‍ರವರುಗಳು ಮಾತನಾಡಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಎಸ್. ದಾಸಪ್ಪ,  ಎಂ.ಎಸ್. ಲಕ್ಷ್ಮೀಕಾಂತ್, ಬಿ.ಎಂ. ಸುರೇಶ್, ಸೋಮಶೇಖರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಜೇಶ್ವರಿ ಶ್ರೀಧರ್ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: