
ಪ್ರಮುಖ ಸುದ್ದಿ
ವಿರಾಜಪೇಟೆ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ : ಕಾಂಗ್ರೆಸ್ ಟೀಕೆ
ರಾಜ್ಯ(ಮಡಿಕೇರಿ) ನ.6 :- ಸೋಲಿನ ಭೀತಿಯಿಂದ ಹತಾಶೆಗೊಂಡಿದ್ದ ಬಿಜೆಪಿ ವೀರಾಜಪೇಟೆ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಭ ಕೀಳುಮಟ್ಟದ ರಾಜಕೀಯ ಪ್ರದರ್ಶಿಸಲು ಮುಂದಾಗಿತ್ತು, ಆದರೆ ಮತದಾರರು ತಕ್ಕ ಉತ್ತರವನ್ನೇ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವ ಬಗ್ಗೆ ಖಾತ್ರಿಯಾಗಿ ಹತಾಶೆಗೊಂಡ ಬಿಜೆಪಿ, ವಿನಾಕಾರಣ ಗಲಭೆಗಳನ್ನು ಹುಟ್ಟು ಹಾಕಿ ಮತದಾರರಲ್ಲಿ ಆತಂಕವನ್ನು ಸೃಷ್ಟಿಸಿತ್ತು ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಧೈರ್ಯಗುಂದಿಸುವ ಪ್ರಯತ್ನ ಬಿಜೆಪಿಯಿಂದ ನಡೆಯಿತು. ಆದರೆ, ವೀರಾಜಪೇಟೆ ಪೊಲೀಸರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಶಾಂತಿಯುತ ಮತ್ತು ನ್ಯಾಯಬದ್ಧ ಚುನಾವಣೆ ನಡೆಸಲು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಬಿಜೆಪಿ ಅಭ್ಯರ್ಥಿಗಳಾಗಿದ್ದ ಪ.ಪಂ ಇಬ್ಬರು ಮಾಜಿ ಅಧ್ಯಕ್ಷರು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಇನ್ನಾದರು, ಪಾಠ ಕಲಿಯುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿ ಪಟ್ಟಣದ ಅಭಿವೃದ್ಧಿಗೆ ಬಿಜೆಪಿ ಮುಂದಾಗಲಿ ಎಂದು ಸಲಹೆ ನೀಡಿದರು. ಪ್ರಸ್ತುತ ತನ್ನ ತಪ್ಪಿನ ಅರಿವಾಗಿರುವುದರಿಂದ ಇದೇ ನ.7 ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯಿಂದ ಬಿಜೆಪಿ ಹಿಂದಕ್ಕೆ ಸರಿದಿದೆ ಎಂದು ಅಭಿಪ್ರಾಯಪಟ್ಟರು.
ಅಧಿಕಾರ ನಮ್ಮದೆ
ವೀರಾಜಪೇಟೆ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ ನಮ್ಮ ಸಂಖ್ಯಾಬಲ 10 ಆಗಿದ್ದು, ಪಕ್ಷೇತರರು ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ. ಆದ್ದರಿಂದ ನಾವೇ ಅಧಿಕಾರ ಹಿಡಿಯಲಿದ್ದೇವೆ ಎಂದು ಟಾಟು ಮೊಣ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ.ಸಲಾಂ, ಪ.ಪಂ ಸದಸ್ಯರುಗಳಾದ ರಂಜಿ ಪೂಣಚ್ಚ, ಸಿ.ಕೆ.ಪೃಥ್ವಿನಾಥ್, ಮೊಹಮ್ಮದ್, ಅಗಸ್ಟಿನ್ ಸಿ.ಜಿ. ಹಾಗೂ ರಾಜೇಶ್ ಪದ್ಮನಾಭ ಉಪಸ್ಥಿರಿದ್ದರು. (ಕೆಸಿಐ,ಎಸ್.ಎಚ್)