ಮೈಸೂರು

ಮಣ್ಣಿನ ಹಣತೆ ನೀಡಿ ಪಟಾಕಿ ಸಿಡಿಸದಿರುವಂತೆ ಅರಿವು

ಮೈಸೂರು,ನ.6-ಬೆಳಕಿನ ಹಬ್ಬ ದೀಪಾವಳಿಯನ್ನು ಪಟಾಕಿ ಸಿಡಿಸಿ ಆಚರಿಸುವುದಲ್ಲ. ಬದಲಿಗೆ ಮಣ್ಣಿನ ದೀಪವನ್ನು ಹಚ್ಚಿ ಆಚರಿಸಿ ಎಂದು ಜಾಗೃತಿ ಮೂಡಿಸಲು ಅರಿವು ಸಂಸ್ಥೆಯವರು ನಗರದ ಚಿಕ್ಕಗಡಿಯಾರದ ಬಳಿ ಸಾರ್ವಜನಿಕರಿಗೆ ಮಣ್ಣಿನ ಹಣತೆ ನೀಡಿದರು.

ಹಣತೆಯನ್ನು ನೀಡಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಪ್ರತಿ ಮನೆ-ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಉದ್ದೇಶ ಎಂದರು.

ಹಬ್ಬಗಳ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ. ಪುಣ್ಯ ಕಥೆಯನ್ನು ಬೆಸೆದು ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಸಮಾಜಸೇವಕರಾದ ರಘುರಾಮ್ ವಾಜಪೇಯಿ ಮಾತನಾಡಿ, ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿಜಕ್ಕೂ ಸ್ವಾಗತಾರ್ಹ. ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯದಿಂದಾಗಿ ದೆಹಲಿ ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಜನರು ಉಸಿರಾಟ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ. ಕೇವಲ ದೀಪಾವಳಿಯಲ್ಲಿ ಮಾತ್ರವಲ್ಲದೆ ವಿವಿಧ ಖಾಸಗಿ ಸಂಭ್ರಮಗಳಿಗಾಗಿ ಪಟಾಕಿ ಸಿಡಿಸುವುದನ್ನೂ ಸರ್ಕಾರ ನಿರ್ಬಂಧಿಸಬೇಕು. ಅಲ್ಲದೆ, ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಎಲ್ಲರೂ ದೀಪಗಳನ್ನು ಬೆಳಗಿಸುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಿಸಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿಯಬೇಕಿದೆ ಎಂದರು.

ಕಾರ್ಖಾನೆಗಳಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿ ತಯಾರಿಕೆ ನಿಷೇದಿಸಿ ಕಡಿಮೆ ಹೊಗೆ, ಹೊಗೆ ರಹಿತ ಪರಿಸರ ಸ್ನೇಹಿ ಅಥವಾ ಹಸಿರು ಪಟಾಕಿಗಳ ತಯಾರಿಕೆಗೆ ಸರ್ಕಾರ ಸೂಕ್ತ ನಿಯಮ ತರಬೇಕಿದೆ . ಹಾಗೆಯೇ ಪಟಾಕಿಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳ ಬಗ್ಗೆಯೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ನಗರಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ಜನ ಚೇತನ ಅಧ್ಯಕ್ಷರಾದ ಪ್ರಸನ್ನ ಗೌಡ, ಮಾಜಿ ನಗರ ಪಾಲಿಕೆ ಸದಸ್ಯರಾದ ಪಾರ್ಥಸಾರಥಿ, ಬಿಎಸ್ಪಿ ಅಧ್ಯಕ್ಷರಾದ ಬಸವರಾಜು ,ಅರಿವು  ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಬ್ರಾಹ್ಮಣ ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಯದುನಂದನ್, ನಾಗೇಶ್, ಪುನೀತ್ ಗೌಡ, ಹರೀಶ್ ನಾಯ್ಡು, ಡಿ.ಕೆ.ನಾಗಭೂಷಣ್, ಶಿವು, ಯಶಸ್ ಕಶ್ಯಪ್, ರವಿತೇಜ ಇತರರು ಇದ್ದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: