ಪ್ರಮುಖ ಸುದ್ದಿಮೈಸೂರು

ಜೆಡಿಎಸ್ ಕಾರ್ಯಕರ್ತನ ಹತ್ಯೆ : ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿದೆ. ಶನಿವಾರ ರಾತ್ರಿಯೂ ಸಹ ಹತ್ಯೆ ಪ್ರಕರಣ ಮರುಕಳಿಸಿದ್ದು, ಜೆಡಿಎಸ್ ಕಾರ್ಯಕರ್ತನೋರ್ವನ ಹತ್ಯೆಯಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹತ್ಯೆಯಾದವನನ್ನು ಹರೀಶ್ ಅಲಿಯಾಸ್ ಗುಂಡ(32) ಬಿನ್ ರಾಜೇಗೌಡ ಎಂದು ಗುರುತಿಸಲಾಗಿದೆ. ಮಂಡ್ಯದ ಮುರುಕನಹಳ್ಳಿ ಗ್ರಾಮದಲ್ಲಿ ಹತ್ಯೆ ನಡೆದಿದೆ. ಕಳೆದ ಒಂದು ವಾರದಲ್ಲಿ 4 ಹತ್ಯೆಗಳು ನಡೆದಿದ್ದು ಜೆಡಿಎಸ್ ಕಾರ್ಯಕರ್ತರೇ ಹತ್ಯೆಗೊಳಗಾಗಿರುವುದು ಸಂಶಯಕ್ಕೆ ಎಡೆಮಾಡಿದೆ.
ಅದೇ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ರಕ್ಷಿತ್ ಮತ್ತು ಯೋಗೇಶ್ ಎಂಬುವವರೇ ಹರೀಶನನ್ನು ಹತ್ಯೆಗೈದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮೃತ ಹರೀಶ್ ಮತ್ತು ರಕ್ಷಿತ್ ಯೋಗೇಶ್ ಇವರುಗಳ ನಡುವೆ ಆಗಿಂದಾಗ್ಗೆ ಪಕ್ಷದ ಚಟುವಟಿಕೆಗಳ ಸಂಬಂಧ ಮಾತಿನ ಚಕಮಚಿ ನಡೆಯುತ್ತಿತ್ತು ಎನ್ನಲಾಗಿದೆ. ಶನಿವಾರ ರಾತ್ರಿಯೂ ಸಹಾ ಇವರುಗಳ ನಡುವೆ ನಡೆದ ಮಾತಿನ ಸಂಘರ್ಷ ತಾರಕಕ್ಕೇರಿದ ಪರಿಣಾಮ ವಿಪರೀತ ಕ್ರೋಧಗೊಂಡ ರಕ್ಷಿತ್, ಯೋಗೇಶ್ ಇಬ್ಬರೂ ಹರೀಶ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.  ಪರಿಣಾಮ ತೀವ್ರವಾಗಿ ಗಾಯಗೊಂಡ ಹರೀಶ್ ಮೃತಪಟ್ಟಿದ್ದಾನೆ.
ಹರೀಶ್ ನ ಹತ್ಯೆಯ ವಿಷಯ ತಿಳಿದ ಕೂಡಲೇ ಹರೀಶ್ ಕಡೆಯವರು ರಕ್ಷಿತ್, ಯೋಗೇಶ್  ಹಾಗೂ ಅವರ ಬಂಧುಗಳಿಗೆ ಸೇರಿದ 4 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಗಲಭೆಯಲ್ಲಿ 2 ಗೂಡ್ಸ್ ವಾಹನಗಳೂ 1 ಸ್ಕಾರ್ಪಿಯೋ ಕಾರು, 1 ಎತ್ತಿನಗಾಡಿ ಜಖಂಗೊಂಡಿದೆ. ಮುರುಕನಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಹತ್ಯೆಯ ವಿಷಯ ತಿಳಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ, ಐಜಿಪಿ ಬಿಜಯಕುಮಾರ್ ಸಿಂಗ್, ಕೆ ಆರ್ ಪೇಟೆ ಸರ್ಕಲ್ ಇನ್ಸಪೆಕ್ಟರ್ ವೆಂಕಟೇಶಯ್ಯ, ಸಬ್ ಇನ್ಸಪೆಕ್ಟರ್ ಅರುಣಕುಮಾರ್ ಮುರುಕನಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀಂದ್ರ ಆರೋಪಿಗಳನ್ನು ಬಂಧಿಸಲು 2 ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದರಲ್ಲದೆ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು, ಕೃಷ್ಣೇಗೌಡ ಎಂಬವರು ರಕ್ಷಿತ್ ಹಾಗೂ ಯೋಗೇಶ್ ನ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣ ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

Leave a Reply

comments

Related Articles

error: