ಮೈಸೂರು

ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಒತ್ತಾಯ

ರಾಜ್ಯ ಸರ್ಕಾರ ನೌಕರರಿಗೆ ನಿವೃತ್ತಿ ನಂತರ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸರ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. (ನೂತನ ಪಿಂಚಣಿ ಯೋಜನೆ) ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಆಗ್ರಹಿಸಿದರು.

ಭಾನುವಾರ, ಪತ್ರಕರ್ತರ ಭವನದಲ್ಲಿ ಸಂಘ 2017ರ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ 2006 ರಿಂದ ಪಿಂಚಣಿ ಯೋಜನೆಯನ್ನು ಮಾರ್ಪಡು ಮಾಡಿರುವ ಸರ್ಕಾರ, 35-40 ವರ್ಷಗಳ ಕಾಲ ಸೇವೆ ಸಲ್ಲಿಸುವ ನೌಕರ ಸಂಧ್ಯಾ ಕಾಲದಲ್ಲಿ ಹಿತಕಾಯುವ ಬದಲು ಅವೈಜ್ಞಾನಿಕವಾಗಿ ಇಡುಗಂಡು ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು ನೌಕರರ ದೌರ್ಭಾಗ್ಯವೆಂದರು.

ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿಯವರು ಸಾವನ್ನಪ್ಪಿ ವರ್ಷಗಳೇ ಗತಿಸಿದ್ದರು ಇಂದಿಗೂ ಪಿಂಚಣಿ ನಿಗದಿಯಾಗಿಲ್ಲ. ಅಂತಹ ಉನ್ನತ ಅಧಿಕಾರಿಗಳ ಸ್ಥಿತಿಯೇ ಹೀಗಿದ್ದಾಗ ಡಿ ಗ್ರೂಪ್ ನೌಕರರು-ಉದ್ಯೋಗಿಗಳ ಸಮಸ್ಯೆ ಶೋಚನೀಯ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು ಕನಿಷ್ಠ ಮಟ್ಟದ ವೇತನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ನೌಕರರ ಹಿತಕಾಯುವಲ್ಲಿ ಸರ್ಕಾರವೂ ವಿಫಲವಾಗಿದ್ದು, ನೌಕರರ ವೇತನದಿಂದ ಶೇ.10ರಷ್ಟು ಷೇರು ಮಾರುಕಟ್ಟೆಯಲ್ಲಿ ಹೂಡುತ್ತಿದ್ದು ಅಂದಿನ ಮಾರುಕಟ್ಟೆ ನಿಗದಿಯಂತೆ ಇಡುಗಂಟು ನೀಡುವ ಬಗ್ಗೆ ಇರುವ ನಿಯಮಗಳೂ ಪಾರದರ್ಶಕವಿಲ್ಲದ ಕಾರಣ ಹಲವಾರು ಗೊಂದಲಗಳಿಗೆ ಕಾರಣವಾಗಿದೆ.

ಸದರಿ ಕಾಯಿದೆಯನ್ವಯ ಹಣಕ್ಕೆ ಕನಿಷ್ಠ ಭದ್ರತೆಯೂ ಇಲ್ಲ ಎಂದು ತಿಳಿಸಿದ ಅವರು ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಹರಿಸಿ ಕಾನೂನು ತಿದ್ದುಪಡಿಗೆ ಒತ್ತಾಯಿಸಿ ಮಾರ್ಚ್ ನಲ್ಲಿ “ಸಂಸತ್ ಚಲೋ” ಚಳುವಳಿಯನ್ನು ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷ ಬಸವರಾಜು ಎಂ.ಬಿ, ಕಾರ್ಯದರ್ಶಿ ಚೆಲುವರಾಜು ಎಚ್.ಎಲ್, ಟಿ.ನರಸೀಪುರ ತಾಲೂಕು ಅಧ್ಯಕ್ಷ ಶ‍್ರೀಧರ್, ಸಿದ್ದಮಲ್ಲಪ್ಪ, ನಂಜನಗೂಡು, ಹುಣಸೂರು ಮತ್ತು ಟಿ.ನರಸೀಪುರದ ತಾಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: