ಮೈಸೂರು

ನ.14 ರಿಂದ `ಶ್ರೀರಾಮಾಯಣ ದರ್ಶನಂ’ ನಾಟಕ ಪ್ರದರ್ಶನ

ಮೈಸೂರು,ನ.7-ರಾಷ್ಟ್ರಕವಿ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಂದು ಐವತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಂಗಾಯಣದ ವತಿಯಿಂದ ನ.14 ರಂದು `ಶ್ರೀರಾಮಾಯಣ ದರ್ಶನಂ’ ನಾಟಕ ಪ್ರದರ್ಶನಗೊಳ್ಳಲಿದ್ದು, ಇದು ರಂಗಾಯಣದ ಇತಿಹಾಸದಲ್ಲಿ ಮತ್ತೊಂದು ಮಹಾ ಪ್ರಯೋಗವಾಗಿದೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು.

ಬುಧವಾರ ರಂಗಾಯಣದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನ.14 ರಂದು ರಂಗಾಯಣದ ಭೂಮಿಗೀತದಲ್ಲಿ ಆರಂಭವಾಗುವ ಮಹಾಕಾವ್ಯದ ರಂಗಪ್ರಸ್ತುತಿಯು ನ.18 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ನಂತರ ನ.23 ಮತ್ತು 24 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಪಯಣದ ಪ್ರದರ್ಶನಗಳನ್ನು ನೀಡಿ ನಾಡಿನಾದ್ಯಂತ ಸಂಚರಿಸಿ 2019ರ ಜನವರಿ ವರೆಗೆ ಪ್ರದರ್ಶನಗಳನ್ನು ನೀಡಲಾಗುವುದು ಎಂದರು.

ಶ್ರೀರಾಯಾಯಣ ದರ್ಶನಂ ಮಹಾಕಾವ್ಯದಲ್ಲಿ ಕುವೆಂಪು ಚಿತ್ರಿಸಿರುವ ವೈಚಾರಿಕ ದರ್ಶನಗಳನ್ನು ಪ್ರಸ್ತುತ ಸಮಾಜದ ಜನತೆಯ ಮುಂದಿಡುವ ಪ್ರಯತ್ನವಾಗಿ ಐದು ಗಂಟೆಗಳ ನಾಟಕವನ್ನು ಸಿದ್ಧಪಡಿಸಲಾಗಿದೆ. ಸಂಪೂರ್ಣವಾಗಿ ಮಹಾಕಾವ್ಯದ ಹಳೆಗನ್ನಡ ಭಾಷೆಯಲ್ಲೇ ಸಿದ್ಧಗೊಂಡಿರುವ ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ದಾಖಲೆಯೇ ಸರಿ. ನಾಡಿನಾದ್ಯಂತ ಆಯ್ಕೆ ಮಾಡಿದ ನಲವತ್ತು ಜನ ನುರಿತ ಕಲಾವಿದರು ಮತ್ತು ತಂತ್ರಜ್ಞರು ಮೈಸೂರು ರಂಗಾಯಣದ ಹಿರಿಯ ಕಲಾವಿದರ ಜೊತೆ ಸೇರಿ ನಾಟಕವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ರಂಗಪ್ರಸ್ತುತಿಯ ಅಂಗವಾಗಿ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಆಧರಿಸಿ ಗಂಜೀಫ ಕಲೆಯ ಖ್ಯಾತ ಕಲಾವಿದರಾದ ರಘುಪತಿಭಟ್ ಅವರು ರಚಿಸಿರುವ ಹನ್ನೆರಡು ಕಲಾಕೃತಿಗಳು ಮತ್ತು ರಂಗಾಯಣದ ವಿನ್ಯಾಸಕಾರರಾದ ಎಚ್.ಕೆ.ದ್ವಾರಕಾನಾಥ್ ಅವರು ರಚಿಸಿರುವ ತೆರೆಯ ಹಿಂದಿನ `ಶ್ರೀರಾಮಾಯಣ ದರ್ಶನಂ’ ಚಿತ್ರಮಾಲಿಕೆಗಳ ಉದ್ಘಾಟನೆ ನ.13 ರಂದು ನೆರವೇರಲಿದೆ ಎಂದು ತಿಳಿಸಿದರು.

ಮಹಾಕಾವ್ಯವನ್ನು ರಂಗಾಯಣದ ಹಿರಿಯ ಕಲಾವಿದರಾದ ಜಗದೀಶ ಮನೆವಾರ್ತೆ, ಕೃಷ್ಣಕುಮಾರ್ ನಾರ್ಣಕಜೆ ಅವರೇ ರಂಗರೂಪಕ್ಕಿಳಿಸಿದ್ದಾರೆ. ಭಾರತೀಯ ರಂಗಶಿಕ್ಷಣ ಕೇಂದ್ರದ ಶಿಕ್ಷಕರಾದ ಉಮೇಶ್ ಸಾಲಿಯಾನ್ ಸಹ ನಿರ್ದೇಶನ ಮಾಡಿದ್ದಾರೆ. ಹಿರಿಯ ರಂಗಕರ್ಮಿ ಕೆ.ಜಿ.ಮಹಾಬಲೇಶ್ವರ ನಾಟಕವನ್ನು ನಿರ್ದೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಜಿ.ಎಚ್.ನಾಯಕ್, ಹಿರಿಯ ರಂಗಕರ್ಮಿ ಕೆ.ಜಿ.ಮಹಾಬಲೇಶ್ವರ, ಹಿರಿಯ ಕಲಾವಿದ ಕೃಷ್ಣಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: