
ಮೈಸೂರು
ಕಾರ್ಮಿಕರ ಗುರುತಿನ ಚೀಟಿ ದುರುಪಯೋಗ : ದಲ್ಲಾಳಿತನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ
ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಕಾರ್ಮಿಕರ ಗುರುತಿನ ಚೀಟಿಗಳು ದುರುಪಯೋಗವಾಗುತ್ತಿದ್ದು ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳು ದಲ್ಲಾಳಿಗಳ ಪಾಲಾಗುತ್ತಿವೆ. ರಾಜ್ಯ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಎಂದು ಕರ್ನಾಟಕ ರಾಜ್ಯ ಭಾರತಮತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜಿ.ಸಿದ್ದರಾಜು ಆಗ್ರಹಿಸಿದರು.
ಭಾನುವಾರ ಪತ್ರಕರ್ತರ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸಂಘಟಿತ ಶ್ರಮಜೀವಿ ಕಟ್ಟಡ ಕಾರ್ಮಿಕರು ಸೇರಿದಂತೆ ಮನೆ ನಿರ್ಮಾಣದಲ್ಲಿರುವ ಎಲ್ಲ ಕಾರ್ಮಿಕರಿಗೆ ಇಂಜಿನಿಯರ್ಗಳ ಮನವಿ ಸಹಿ ಆಧರಿಸಿ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗುತ್ತಿದೆ. ಗುರುತಿನ ಪತ್ರ ಪಡೆದವರಿಗೆ ಸರ್ಕಾರದಿಂದ ಮಕ್ಕಳ(2) ಮದುವೆಗೆ ಹಾಗೂ ಮೃತಪಟ್ಟಾಗ 50 ಸಾವಿರ ರೂಪಾಯಿಗಳ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತಿದ್ದು, ಇವು ದಲ್ಲಾಳಿಗಳು, ಬಡ್ಡಿ ವ್ಯಾಪಾರಿಗಳು ಹಾಗೂ ಏಜೆಂಟ್’ಗಳ ಪಾಲಾಗುತ್ತಿವೆ. ಯೋಜನೆಯನ್ನು ಈ ದಲ್ಲಾಳಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೇವಲ 90 ದಿನಗಳಲ್ಲಿ ಬರುವ ಗುರುತಿನ ಚೀಟಿ 9 ತಿಂಗಳಾದರು ದೊರೆಯದೇ ನಿಜವಾದ ಕಾರ್ಮಿಕರು ಪರದಾಡುವಂತಾಗಿದೆ. ಅಲ್ಲದೇ, ಗುರುತಿನ ಚೀಟಿ ಹೊಂದಿದವರಿಗೆ ಉಚಿತ ನಿವೇಶನ ನೀಡಲಾಗುವುದೆಂದು ಸುಳ್ಳು ವದಂತಿಯನ್ನು ಹಬ್ಬಿಸುತ್ತಿರುವ ಕೆಲವೊಂದು ಕಿಡಿಗೇಡಿಗಳು ಅಮಾಯಕ ಕಾರ್ಮಿಕರ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಿಜವಾದ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗುತ್ತಿದ್ದು 10 ಜನ ಕಾರ್ಮಿಕರಿಗೆ 5 ಜನ ದಲ್ಲಾಳಿಗಳಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯು ನಕಲಿ ಗುರುತಿನ ಚೀಟಿದಾರರಿಗೆ ಕಡಿವಾಣ ಹಾಕುವುದು ಅತಿ ಅವಶ್ಯವಿದ್ದು ಈ ನಿಟ್ಟಿನಲ್ಲಿ ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಪರಮೇಶ್, ಸಹ ಕಾರ್ಯದರ್ಶಿ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಪರಶುರಾಮ್, ನಂಜನಗೂಡು ತಾಲೂಕು ಅಧ್ಯಕ್ಷ ರಾಜೇಶ್ ಉಪಸ್ಥಿತರಿದ್ದರು.