ಪ್ರಮುಖ ಸುದ್ದಿ

ಜನರತ್ತ ಮಾಧ್ಯಮ ಕಾರ್ಯಕ್ರಮಕ್ಕೆ ನೊಕ್ಯಾ ಗ್ರಾಮದಲ್ಲಿ ಚಾಲನೆ : ನೈಜ ವರದಿಗಾರಿಕೆ ಮೂಲಕ ಸಮಸ್ಯೆ ಮೂಲವನ್ನು ಆಡಳಿತ ವ್ಯವಸ್ಥೆಗೆ ಮುಟ್ಟಿಸುವ ಕೆಲಸ

ರಾಜ್ಯ(ಮಡಿಕೇರಿ)ನ.7:-  ಜನರು ಅನುಭವಿಸುತ್ತಿರುವ ಸಮಸ್ಯೆಗಳ ಮೂಲ ಅರಿತು ವಸ್ತುಸ್ಥಿತಿ ಬಿಂಬಿಸುವ ಉದ್ದೇಶದಿಂದ ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಿರುವ ಜನರತ್ತ ಮಾಧ್ಯಮ ಕಾರ್ಯಕ್ರಮಕ್ಕೆ ನೊಕ್ಯಾ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ಕಾಡಾನೆಗಳಿಂದ ನಿತ್ಯ ಯಾತನೆ ಅನುಭವಿಸುತ್ತಿರುವ ನೊಂದ ಕೃಷಿಕರುಗಳಾದ ಚೆಕ್ಕೇರ ಎಂ. ಬೆಳ್ಯಪ್ಪ ಹಾಗೂ ಚೆಪ್ಪುಡೀರ ಕಾರ್ಯಪ್ಪ ಕಾಡಾನೆಗಳಿಂದ ಬೆಳೆ ಕಳೆದುಕೊಂಡಿರುವ ಭತ್ತದ ಗದ್ದೆಯ ಫೋಟೋ ಕ್ಲಿಕ್ಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ಕೃಷಿಕರು ಒಂದಾಗಿ ಸಮಸ್ಯೆ ಅನಾವರಣಗೊಳಿಸಿದರು. ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಮಾಧ್ಯಮ ಸಂಘಟನೆಯೊಂದು ನೊಂದವರತ್ತ ತೆರಳಿ ವಸ್ತುಸ್ಥಿತಿಯನ್ನು ಬಿಂಬಿಸುವ ಪ್ರಯತ್ನ ಮೆಚ್ಚುವಂತಹದ್ದು. ಬಹುಶಃ ಇಂತಹ ಕಾರ್ಯಕ್ರಮ ಇದೆ ಮೊದಲು ಎಂಬ ಭಾವನೆ ನನ್ನದು, ಕಾಡಾನೆಗಳ ಉಪಟಳದಿಂದ ನೊಂದಿರುವ ನಮಗೆ ಇಂತಹ ಕಾರ್ಯಕ್ರಮ ಕೃಷಿಯತ್ತ ಹೆಚ್ಚು ಪ್ರೋತ್ಸಾಹ ನೀಡುವಂತೆ ಮಾಡಿದೆ. ಮತ್ತಷ್ಟು ಕಾರ್ಯಕ್ರಮಗಳು ಜನರ ಹಿತ ಕಾಯುವಂತಾಗಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಪ್ರೆಸ್‍ಕ್ಲಬ್ ನಿರ್ದೇಶಕ ಕಿಶೋರ್‍ರೈ ಕತ್ತಲೆಕಾಡು ಮಾತನಾಡಿ, ಸಾಕಷ್ಟು ಜನರಿಗೆ ಮಾಧ್ಯಮಗಳಲ್ಲಿ ತಮ್ಮ ಸುದ್ದಿ ಯಾವ ರೀತಿ ಪ್ರಕಟಗೊಳ್ಳುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಇದರಿಂದ ಸಾಕಷ್ಟು ಸಾಧನೆ, ಸಮಸ್ಯೆಗಳು ಬೆಳಕು ಕಾಣದಂತಾಗಿದೆ. ಇಂತಹ ಕಾರ್ಯಕ್ರಮಗಳು ಸಾಕಷ್ಟು ಪರಿಣಾಮಕಾರಿಯಾಗಿ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವಂತಾಗಬೇಕು ಎಂದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಮಾಧ್ಯಮ ಎಲ್ಲಾ ವರ್ಗದವರನ್ನು ತಲುಪುತ್ತಿಲ್ಲ ಎಂಬ ಮಾತುಗಳಿಗೆ ಮುಕ್ತಿ ಹಾಡಲು ಇಂತಹ ಕಾರ್ಯಕ್ರಮಗಳು ಸಾಕಷ್ಟು ಸಹಕಾರಿಯಾಗಲಿದೆ. ಆದಷ್ಟು ತಳಮಟ್ಟದ ನೈಜ ವರದಿಗಾರಿಕೆ ಮೂಲಕ ಸಮಸ್ಯೆ ಮೂಲವನ್ನು ಆಡಳಿತ ವ್ಯವಸ್ಥೆಗೆ ಮುಟ್ಟಿಸುವ ಕೆಲಸದೊಂದಿಗೆ ಸಮಸ್ಯೆ ಪರಿಹಾರಕ್ಕೆ ಗ್ರಾಮಕ್ಕೆ ತೆರಳಿ ವರದಿ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದರು. ಹಿರಿಯ ಬೆಳೆಗಾರ ಚೆಪ್ಪುಡೀರ ರಾಮಕೃಷ್ಣ ಮಾತನಾಡಿ, ಜನರತ್ತ ಮಾಧ್ಯಮ ಎಂಬ ವಿನೂತನ ಚಿಂತನೆಯ ಕಾರ್ಯಕ್ರಮ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸಮಸ್ಯೆ ಪರಿಹಾರಕ್ಕೆ ಈ ಮೂಲಕ ನಾಂದಿ ಹಾಡುವಂತಾಗಲಿ ಎಂದರು. ಪ್ರೆಸ್‍ಕ್ಲಬ್ ಪ್ರ. ಕಾರ್ಯದರ್ಶಿ ಹೆಚ್. ಕೆ. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸ್ಥಳೀಯ ಕೃಷಿಕ ಮಹೇಶ್ ಉಪಸ್ಥಿತರಿದ್ದರು.

ಸಮಸ್ಯೆಗಳ ಅನಾವರಣ

ಜನರತ್ತ ಮಾಧ್ಯಮ ಕಾರ್ಯಕ್ರಮದ ಮೂಲಕ ನೊಕ್ಯ ಗ್ರಾಮಕ್ಕೆ ನುಸುಳಿ ಬರುವ ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳಿಂದಾಗುತ್ತಿರುವ ಕಷ್ಟ, ನಷ್ಟಗಳ ಚಿತ್ರಣ ಅನಾವರಣಗೊಂಡವು. ಬೆಳೆ ನಷ್ಟದಿಂದ ಗ್ರಾಮದಲ್ಲಿ ಸಂಪೂರ್ಣ ಕುಸಿದ ಕೃಷಿ ಚಟುವಟಿಕೆ, ಬೆಳೆ ರಕ್ಷಣೆಗೆ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ರೈತರು, ಆರ್ಥಿಕ ದುಸ್ಥಿತಿ, ಭಯದಿಂದ ಕಾರ್ಮಿಕರ ಕೊರತೆ, ಭತ್ತ ಕೃಷಿಯಿಲ್ಲದೆ ಭವಿಷ್ಯದಲ್ಲಿ ಕಾಡಲಿರುವ ಅಂತರ್ಜಲ ಸಮಸ್ಯೆ ಅನಾವರಣಗೊಂಡವು.

ಅರಣ್ಯ ಇಲಾಖೆ ವನ್ಯಜೀವಿ ಇಲಾಖೆ ಗಡಿಯಲ್ಲಿ ವನ್ಯಪ್ರಾಣಿಗಳು ಗ್ರಾಮಕ್ಕೆ ನುಗ್ಗದಂತೆ ತಡೆ ಮಾಡದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಸುಮಾರು 10 ಕ್ಕೂ ಹೆಚ್ಚು ಕಡೆಗಳಲ್ಲಿ ಆನೆಗಳು ನಾಡಿಗೆ ತೊಡಕಿಲ್ಲದೆ ನುಗ್ಗುತ್ತವೆ. ರಾಜೀವ್‍ಗಾಂಧಿ ಉದ್ಯಾನವನದ ಮತ್ತಿಗೋಡು ವಲಯದ ಅಂಚಿನಲ್ಲಿರುವ ಅರಕೇರಿ ಎಂಬಲ್ಲಿ ಕಾಡಾನೆಗಳು ನಾಡಿಗೆ 50 ಕ್ಕೂ ಜಾಗದಲ್ಲಿ ನುಗ್ಗುತ್ತವೆ. ವನ್ಯಜೀವಿ ಇಲಾಖೆ ಪ್ರಾಣಿಗಳು ಗ್ರಾಮಕ್ಕೆ ನುಗ್ಗದಂತೆ ಕಾವಲು ಕಾಯಬೇಕಾಗಿದ್ದರೂ ಅದನ್ನು ಮಾಡುತ್ತಿಲ್ಲ. ತಿತಿಮತಿ ಅರಣ್ಯ ವಲಯಕ್ಕೆ ನೊಕ್ಯಾ ಗ್ರಾಮ ಸೇರುವುದರಿಂದ ತಿತಿಮತಿ ಅರಣ್ಯ ಇಲಾಖೆ ವನ್ಯ ಇಲಾಖೆ ಪ್ರಾಣಿಗಳನ್ನು ತಮ್ಮ ವ್ಯಾಪ್ತಿಗೆ ಬಾರದಂತೆ ಕಾವಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಆರ್‍ಆರ್‍ಟಿ ತಂಡ ರಚಿಸಿಕೊಂಡು ಕಾವಲು ಕಾಯುತ್ತದೆ. ವನ್ಯಜೀವಿ ಇಲಾಖೆ ನಿರ್ಲಕ್ಷ್ಯದಿಂದ ಕಾಡಾನೆಗಳು ಒಳನುಸುಳುವ ಹೆಬ್ಬಾಗಿಲನ್ನು ತಿತಿಮತಿ ಅರಣ್ಯ ಇಲಾಖೆ ಕಾಯುವ ಮೂಲಕ ಅನ್ನದಾತನ ರಕ್ಷಣೆಗೆ ಮುಂದಾಗಿದೆ. ಮತ್ತಿಗೋಡು ವನ್ಯ ವಲಯದ 7.5 ಕಿ. ಮೀ. ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳಿಂದ ತಡೆಗೋಡೆ ನಿರ್ಮಾಣ ಕಾರ್ಯ ಅಪೂರ್ಣದಲ್ಲಿದೆ. ಅರಣ್ಯದ ಎರಡು ಬದಿಗಳಲ್ಲಿಯೂ ರೈಲ್ವೆ ಕಂಬಿ ತಡೆ ಇದ್ದು, ಮಧ್ಯದಲ್ಲಿ ಬಾಕಿ ಉಳಿದಿದೆ. ಈ ಭಾಗದಲ್ಲಿ ತಡೆ ಮಾಡಿದರೆ, ಕಾಡಾನೆಗಳು ನೊಕ್ಯ ಗ್ರಾಮಕ್ಕೆ ನುಸುಳಲು ಆಗುವುದಿಲ್ಲ.

ನೊಕ್ಯಾ ಗ್ರಾಮದಿಂದ ಕಾಡಾನೆಗಳ ಉಪಟಳ ಕಳೆದೆರಡು ದಶಕಗಳಿಂದ ನಡೆಯುತ್ತಿದೆ. ಅಲ್ಲಿಂದ ಒಳಬರುವ ಆನೆಗಳು ಸುಮಾರು 10 .ಕಿ. ಮೀ. ವ್ಯಾಪ್ತಿಯ ಗ್ರಾಮಗಳಾದ ದೇವರಪುರ, ಕಮಟೆ, ಮಾಯಮುಡಿ, ಬಾಳಾಜಿ, ಚೆನ್ನಂಗೊಲ್ಲಿ, ಕಲ್ತೋಡು, ಕಿರುಗೂರು, ನಲ್ಲೂರು ಭಾಗಗಳ ತೋಟಗಳಿಗೆ ಲಗ್ಗೆ ಇಡುತ್ತವೆ.

ಇಬ್ಬರೇ ಭತ್ತ ಕೃಷಿಕರು

ಸುಮಾರು 50 ಕ್ಕೂ ಹೆಚ್ಚು ಭತ್ತ ಬೆಳೆಯುವ ಕೃಷಿಕರಿರುವ 4 ಸಾವಿರಕ್ಕೂ ಅಧಿಕ ಎಕರೆ ಗದ್ದೆ ಇರುವ ನೊಕ್ಯಾ ಗ್ರಾಮದಲ್ಲಿ ಕೇವಲ 10 ಏಕ್ರೆಗಳಷ್ಟು ಮಾತ್ರ ನೆಡಲಾಗುತ್ತಿದೆ. ಇಬ್ಬರು ಮಾತ್ರ ಭತ್ತ ಕೃಷಿ ಮಾಡುತ್ತಿದ್ದಾರೆ. ಚೆಪ್ಪುಡೀರ ಕಾರ್ಯಪ್ಪ ಹಾಗೂ ಮಹೇಶ್ ಭೂಮಿ ನೆಡುತ್ತಾರೆ. ಉಳಿದ ಭೂಮಿ ಪಾಳು ಬಿದ್ದಿದೆ. ಉಳಿದಂತೆ 8 ಗ್ರಾಮಗಳಲ್ಲಿ ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಕಾವಲು ಕಾಯುವ ಸ್ಥಿತಿ ಇದೆ. ತಿತಿಮತಿ ಆರ್‍ಆರ್‍ಟಿ ತಂಡದ ನಾಯಕ ಸಂಜು ಸಂತೋಷ್ ಸೇರಿದಂತೆ 9 ಜನರ ತಂಡ ನಿತ್ಯ ರಾತ್ರಿ ಕಾಡಾನೆಗಳನ್ನು ನಾಡಿಗೆ ಬಾರದಂತೆ ತಡೆಯಲು ಕಾವಲು ಕಾಯುತ್ತಾರೆ. ಸುಮಾರು 7 ಕಿ. ಮೀ. ವ್ಯಾಪ್ತಿಯ ಅರಣ್ಯ ಪ್ರದೇಶದ ಅಂಚಿನಲ್ಲಿ ರೈಲ್ವೆ ಕಂಬಿಗಳ ಯೋಜನೆ ಅನುಷ್ಠಾನವಾಗಿಲ್ಲ. ಇದರಿಂದಾಗಿ ಆನೆಗಳನ್ನು ತಡೆಯಲು ನೊಕ್ಯ ಭಾಗದ ಗಡಿಯಲ್ಲಿ ಬೆಂಕಿ ಹಾಕಿಕೊಂಡು ಕಾಯುವುದು ವಾಡಿಕೆ. ಬೆಂಕಿ ಇರುವಲ್ಲಿ ಕಾವಲು ಕಾಯುವುದನ್ನು ಅರಿತುಕೊಂಡ ಆನೆಗಳು ಅತ್ತ ತೆರಳದೆ ಬೇರೆ ಜಾಗದಿಂದ ನುಗ್ಗುತ್ತವೆ. ಇದರಿಂದಾಗಿ ತಂಡವು 2-3 ತಂಡಗಳಾಗಿ ಮಾಡಿಕೊಂಡು ರಸ್ತೆಗಳಲ್ಲಿ ರಾತ್ರಿ 12 ಗಂಟೆವರೆಗೆ ಕಾದು ತೆರಳುತ್ತಾರೆ. ಒಮ್ಮೊಮ್ಮೆ ಆನೆಗಳು ತಂಡವು ಮನೆಗೆ ತೆರಳಿದ ನಂತರ ಗ್ರಾಮಕ್ಕೆ ನುಸುಳಿದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ತಂಡದಲ್ಲಿ ಬೈರ, ಸುರೇಶ್, ಮೋಹನ, ಜೆ. ಆರ್. ಸುರೇಶ್, ಗಿರೀಶ್, ವಿನಯ್, ಸುನಿಲ್ ಹಾಗೂ ದಿನೇಶ್ ಪಾಲ್ಗೊಳ್ಳುತ್ತಾರೆ. ತಿತಿಮತಿ ವಲಯ ವತಿಯಿಂದ ಆರ್‍ಆರ್‍ಟಿ ತಂಡಕ್ಕೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಆರೋಪ ಸ್ವತಃ ಕೃಷಿಕರೇ ಮಾಡಿದರು. ಅವರಿಗೆ ಬೇಕಾದ ಪಟಾಕಿ ಇಂತಹವುಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ, ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೂಡ ವ್ಯಕ್ತವಾಯಿತು.

ನೊಂದ ಬೆಳೆಗಾರ ಚೆಕ್ಕೇರ ಎಂ. ಬೆಳ್ಯಪ್ಪ ಮಾತನಾಡಿ,  ವನ್ಯಜೀವಿ ಇಲಾಖೆ ರೈಲ್ವೆ ಕಂಬಿಗಳಿಗೆ ಬೇಕಾದ ಹಣವನ್ನು ಪಾವತಿ ಮಾಡದಿರುವುದೇ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಕಂಬಿ ನಿರ್ಮಿಸಲು ಗುಂಡಿ ತೋಡಿ ಇಡಲಾಗಿದೆ. ಆದರೆ, ಆ ಕಂಪೆನಿಗಳಿಗೆ ಹಣ ಪಾವತಿಸದ ಕಾರಣ ಕಂಬಿ ಲಭ್ಯವಾಗಿಲ್ಲ. ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡಿ, ರೈತ ಹಿತ ಕಾಯಬೇಕು.  7.5 ಕಿ. ಮೀ. ವ್ಯಾಪ್ತಿಯ 3 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲು ಕಂಬಿ ನಿರ್ಮಾಣವಾಗಬೇಕು. ಇದರಿಂದ ಸಾಕಷ್ಟು ಸಮಸ್ಯೆ ಪರಿಹಾರ ಕಾಣಲಿದೆ. ವನ್ಯಜೀವಿ ಇಲಾಖೆ ಅಧಿಕಾರಿಗಳು ಕಣ್ತೆರೆಯಲಿ ಎಂದರು.

ರೈತ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಭತ್ತ ಬೆಳೆ ಉಳಿಸಿಕೊಳ್ಳಲು ಮುಂದಿನ 25 ದಿನಗಳ ಕಾಲ ಕಾಡಾನೆಗಳನ್ನು ಕಾವಲು ಕಾಯಬೇಕಾಗಿದೆ. ಒಂದು ಗಂಟೆ ಸುಮ್ಮನೆ ಕುಳಿತರೂ ಬೆಳೆದ ಭತ್ತ ಕೈಸೇರುವುದಿಲ್ಲ. ಗ್ರಾಮದಲ್ಲಿ ನಾನು ಸೇರಿದಂತೆ ಕೇವಲ ಒಬ್ಬರು ಮಾತ್ರ ಭತ್ತ ಕೃಷಿ ಮಾಡುತ್ತಿದ್ದೇವೆ. ಇದನ್ನು ರಕ್ಷಿಸಿಕೊಳ್ಳಲು ನಾವು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಿತಿಮತಿ ಆರ್‍ಆರ್‍ಟಿ ತಂಡ ರಾತ್ರಿ 12 ಗಂಟೆವರೆಗೆ ಕಾವಲು ಕಾಯುತ್ತದೆ. ಅವರು ತೆರಳಿದ ನಂತರ ಆನೆಗಳು ನುಸುಳುವ ಪರಿಪಾಠವಾಗಿದೆ. ಆದ್ದರಿಂದ ವನ್ಯಜೀವಿ ಇಲಾಖೆ ಕೂಡ ಕೃಷಿಕರ ನೋವು ಅರಿತು ರಾತ್ರಿ 12 ಗಂಟೆ ನಂತರ ಕಾವಲು ಕಾಯಲಿ. ಇದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳಬಹುದು.

ನೊಂದ ಕೃಷಿಕ ಚೆಪ್ಪುಡೀರ ರಾಮಕೃಷ್ಣ ಮಾತನಾಡಿ, ನಮ್ಮ ಮುಖ್ಯಬೆಳೆ, ಕಾಫಿ, ಭತ್ತ, ಕಾಳುಮೆಣಸು ಕಾಡಾನೆಗಳ ಉಪಟಳದಿಂದ ನಾಶವಾಗುತ್ತಿವೆ. ಉಪ ಬೆಳೆಗಳನ್ನು ಅವಲಂಬಿಸುವ ಸ್ಥಿತಿ ಬಂದಿದೆಯಾದರೂ ಕಾಡಾನೆಗಳು ನಿತ್ಯ ಲೂಟಿ ಮಾಡುತ್ತಿರುವುದು ಕೃಷಿಕ ಕಣ್ಣೀರಿನಿಂದ ಕೈ ತೊಳೆಯುವಂತೆ ಮಾಡಿದೆ. ಆರ್ಥಿಕ ಸಂಕಷ್ಠ ಹೆಚ್ಚಾಗಿದೆ. ವನ್ಯಜೀವಿ ಇಲಾಖೆ ತಡೆ ಮಾಡಿಕೊಳ್ಳದ ಕಾರಣ ಬೆಳೆಗಾರರು ಸೋಲಾರ್ ಬೇಲಿ, ರಾತ್ರಿ ಕಾವಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸೋಲಾರ್ ಬೇಲಿಗೆ ಪ್ರೋತ್ಸಾಹ ಸಿಗಬೇಕು ಎಂದರು.

ಭತ್ತ ನೆಡದ ಕಾರಣ ನೀರು ಹರಿದು ಹೋಗುತ್ತಿದೆ. ಅಂತರ್ಜಲ ಕಾಪಾಡಲು ಭತ್ತದ ಕೃಷಿ ಅವಶ್ಯಕತೆ ಇದೆ. ಆದರೆ, ಕಾಡಾನೆ ಉಪಟಳ ದಶಕಗಳ ಸಮಸ್ಯೆ. ಭತ್ತ ಕೃಷಿ ಮತ್ತೆ ಆರಂಭವಾಗಬೇಕು. ಅಂತರ್ಜಲ ಉಳಿಯಬೇಕು ಎಂದು ಕೃಷಿಕ ಮಹೇಶ್ ಅಭಿಪ್ರಾಯಪಟ್ಟರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: