ಮೈಸೂರು

ರಂಗಭೂಮಿ ಕ್ಷೇತ್ರವೂ ವಿಮರ್ಶೆಗೆ ತೆರೆದುಕೊಂಡರೆ ಹೊಸತನ ಹೊಮ್ಮುತ್ತದೆ : ಸುರೇಶ ಆನಗಳ್ಳಿ

ಮೈಸೂರು: ರಂಗಭೂಮಿಯಲ್ಲಿ ಹೆಚ್ಚೆಚ್ಚು ಮೀಮಾಂಸೆಗಳಾಗದೆ ಇರುವುದರಿಂದ ರಂಗಕರ್ಮಿಗಳ ಕೃತಿ, ಕೆಲಸ, ನಾಟಕಗಳು ಬೆಳಕಿಗೆ ಬರದೆ ಕಲಾವಿದರು ಎಲೆಮರೆ ಕಾಯಿಯಂತಾಗುತ್ತಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಸುರೇಶ ಆನಗಳ್ಳಿ ಬೇಸರ ವ್ಯಕ್ತಪಡಿಸಿದರು.

ಕದಂಬ ರಂಗ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ ಕದಂಬ ರಂಗಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರೆ ದೇಶಗಳ ರಂಗಭೂಮಿಯಲ್ಲಿ ಕತೆಗಿಂತ ಹೆಚ್ಚು ಮಹತ್ವವನ್ನು ಘಟನೆಗಳಿಗೆ ನೀಡುವ ಸಂಸ್ಕೃತಿ ಇದೆ. ಆದರೆ ಭಾರತದಲ್ಲಿ ಹೆಚ್ಚಾಗಿ ಕತೆಗಳನ್ನೇ ಕೇಂದ್ರೀಕರಿಸಿಕೊಂಡು ನಾಟಕಗಳನ್ನು ಮಾಡುತ್ತಿರುವುದರಿಂದ ಕನ್ನಡಕ್ಕೆ ಬಹಳ ನಷ್ಟವಾಗುತ್ತಿದೆ ಎಂದು ಹೇಳಿದರು.

ಸಾಹಿತ್ಯದ ಮೂರು ಪ್ರಕಾರಗಳಾದ ಕವಿ ಕೇಂದ್ರಿತವಾದ ಕಾಲಘಟ್ಟ, ನವ್ಯಕಾಲದ ಕಾಲಘಟ್ಟ ಹಾಗೂ ಕೃತಿಕೇಂದ್ರಿತ ಕಾಲಘಟ್ಟ ಭಾಷಾ ಬೆಳವಣಿಗೆಯಾದಂತೆ ಬದಲಾವಣೆಯಾಗುತ್ತಾ ಬಂತು. ಹಾಗೆಯೇ ಮುಂದುವರಿದು ಓದುಗ ಕೇಂದ್ರಿತ ಸಾಹಿತ್ಯ ಬೆಳವಣಿಗೆಯಾಗಿ ವಿಮರ್ಶಾ ಕ್ಷೇತ್ರದಲ್ಲಿ ಅಗಾಧ ಬದಲಾವಣೆಯಾಯಿತು. ಆದರೆ, ರಂಗಭೂಮಿಯಲ್ಲಿ ಆರಂಭದಿಂದಲೂ ವಿಮರ್ಶೆಗೆ ಅವಕಾಶವೇ ಇಲ್ಲ. ಇದರಿಂದ ರಂಗರ್ಮಿಗಳ ಪ್ರತಿಭೆ ಬೆಳಕಿಗೆ ಬರದೆ ಬೂದಿ ಮುಚ್ಚಿದ ಕೆಂಡದಂತೆಯೇ ಇದ್ದಾರೆ. ಇದರಿಂದ ರಂಗಭೂಮಿಯಲ್ಲಿ ಜ್ಞಾನಪೀಠ ಪುರಸ್ಕೃತರಾಗಲಿ, ಪಂಡಿತರಾಗಲಿ ಇಲ್ಲ ಎಂದು ವಿಷಾದಿಸಿದರು.

ಹಿರಿಯ ರಂಗಕರ್ಮಿ ಡಾ.ನ.ರತ್ನ, ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಸುರೇಶ್ ಬಾಬು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ 2, 3 ಹಾಗೂ 4 ರಂದು “ಮಿಥುನ”, “ಸೀತಾ ಚರಿತ” ಹಾಗೂ “ಬೇರಿಲ್ಲದವರು” ನಾಟಕಗಳನ್ನು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: