ಕರ್ನಾಟಕಪ್ರಮುಖ ಸುದ್ದಿ

ಗಂಟೆಗೂ ಹೆಚ್ಚು ಕಾಲ ಡಿಸಿಎಂ ಪರಮೇಶ್ವರ್ – ಸಿದ್ದರಾಮಯ್ಯ ಚರ್ಚೆ

ಬೆಂಗಳೂರು (ನ.7): ಉಪಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಬ್ಬರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ದೀಪಾವಳಿ ಹಬ್ಬದ ಶುಭಾಶಯ ವಿನಿಮಯ ಸಂದರ್ಭದಲ್ಲೇ ರಾಜ್ಯ ರಾಜಕೀಯ ವಿಚಾರದ ಬಗ್ಗೆಯೂ ಕಾಂಗ್ರೆಸ್‍ನಲ್ಲಿ ಮಹತ್ವದ ಚರ್ಚೆ ನಡೆದಿದೆ. ಇಂದು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದ ಪರಮೇಶ್ವರ್ ಅವರು ಸುದೀರ್ಘ ಚರ್ಚೆ ನಡೆಸಿದರು. ನಿನ್ನೆಯಷ್ಟೆ ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ತೆರಳಿದ್ದರು.

ಇಂದು ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ, ಇನ್ನಿತರ ರಾಜಕೀಯ ಕ್ಷೇತ್ರದ ಮಹತ್ವದ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಬಹುತೇಕ ಶಾಸಕರಿಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕೊಡಬೇಕು ಎಂಬ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ಸಂಬಂಧವೂ ಚರ್ಚಿಸಲಾಗಿದೆ.

ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ನೇಮಕ ಸಂಬಂಧಿಸಿದಂತೆ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಅವರು ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದು, ಅವೆಲ್ಲವನ್ನೂ ಒಗ್ಗೂಡಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಇಂದಿನ ಸಭೆಯಲ್ಲಿ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ನಾಯಕರು ಚಿಂತನೆ ನಡೆಸಿದ್ದಾರೆ.

ನ.15ರ ನಂತರ ದೆಹಲಿಗೆ ತೆರಳುತ್ತಿರುವ ನಾಯಕರು, ಹೈಕಮಾಂಡ್‍ನೊಂದಿಗೆ ಚರ್ಚಿಸಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಜೊತೆಗೆ ಬಳ್ಳಾರಿಯನ್ನು ಮತ್ತೆ ಕೈವಶ ಮಾಡಿಕೊಂಡಿರುವುದು ಪಕ್ಷದ ಬಲವನ್ನು ಹೆಚ್ಚಿಸಿದೆ ಎಂಬುದೂ ಸೇರಿದಂತೆ ಶಿವಮೊಗ್ಗದಲ್ಲಿ ಅಭ್ಯರ್ಥಿ ಸೋಲಿನ ಬಗ್ಗೆ ಪರಮೇಶ್ವರ್ ಅವರೊಂದಿಗೆ ಚರ್ಚಿಸಿದ್ದು, ಮುಂದಿನ ಚುನಾವಣೆಗೆ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಬಗ್ಗೆಯೂ ಗಮನಹರಿಸಲು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: