ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಭಾ ಕ್ಯಾಲೆಂಡರ್ ಬಿಡುಗಡೆ; ನಟರಾಜ ಜೋಯಿಸ್ ಅವರ ಸೇವೆಗೆ ಶ್ಲಾಘನೆ

ಮೈಸೂರು ಜಿಲ್ಲಾ ಬ್ರಾಹ್ಮಣ ಸಭಾದ ವತಿಯಿಂದ ಇಂದು (ಭಾನುವಾರ) ಸಂಧ್ಯಾ ಚೇತನ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸಭಾದ 2017ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಖ್ಯಾತ ರಂಗಕರ್ಮಿ – ನಟ ಮಂಡ್ಯ ರಮೇಶ್ ಅವರು ಮಾತನಾಡಿ, ಮೈಸೂರಿನಲ್ಲಿ ನಾನು ತಿಳಿದ ಮಟ್ಟಿಗೆ ಬ್ರಾಹ್ಮಣ ಸಮುದಾಯ ಸದಸ್ಯರಿಗೆ ಹಲವಾರು ರೀತಿಯ ಸಹಾಯ ಸಹಕಾರಗಳನ್ನು ಸಂಘವು ಮಾಡುತ್ತಿದೆ. ಈ ಮೂಲಕ ಪೂರ್ವೀಕರಿಂದ ಬಂದ ಬ್ರಾಹ್ಮಣ ಧರ್ಮ-ಕರ್ಮಗಳನ್ನು ಅನುಸರಿಸಿಕೊಂಡು ಹೋಗಲು ಸಹಾಯವಾಗಿದೆ. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ನಟರಾಜ್ ಜೋಯಿಸ್ ಅವರಿಗೆ ದೇವಿ ಹೆಚ್ಚಿನ ಆಯಸ್ಸು-ಶಕ್ತಿ ತುಂಬಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ನಟರಾಜ್ ಜೋಯಿಸ್ ಅವರು, ಇಂದು ಬ್ರಾಹ್ಮಣಿಕೆ ಹಾಳಾಗುತ್ತಿದೆ. ನಾನಾ ರೀತಿಯ ಜನರು ಬ್ರಾಹ್ಮಣಿಕೆಯ ವೇಷ ಹಾಕಿಕೊಂಡು ಬ್ರಾಹ್ಮಣರು ಎಂದು ಹೇಳಿಕೊಳ್ಳುತ್ತಿದ್ದಾರೆ. ದಿನ್ನಕ್ಕೊಂದು ಬ್ರಾಹ್ಮಣ ಸಂಘ ತಲೆ ಎತ್ತುತ್ತಿದೆ. ರಾಜಕೀಯ ಪ್ರೇರಿತ, ಹಣ-ಅಧಿಕಾರ ಪ್ರೇರಿತ ಬ್ರಾಹ್ಮಣ ಸಂಘಗಳಿಂದ ಯಾವುದೇ ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯವಿಲ್ಲ. ಕಾಯ-ವಾಚಾ-ಮನಸಾ ಪೂರ್ವೀಕರ ಬ್ರಾಹ್ಮಣಿಕೆ ಉಳಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಹಿರಿಯರೆಲ್ಲರೂ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಚ್.ವಿ. ರಾಜೀವ್ ಅವರು ಬ್ರಾಹ್ಮಣ ಸಂಘದ ಕಾರ್ಯಗಳ ಕುರಿತು ಶ್ಲಾಘಿಸಿದರು.

ಬ್ರಾಹ್ಮಣ ಸಭಾದ ಮುಖ್ಯಸ್ಥರಾದ ಕೆ.ರಘುರಾಂ, ಜಿ.ಆರ್. ವಿದ್ಯಾರಣ್ಯ, ಕುಮಾರಿ ಎಸ್. ಸುಶೀಲ, ಶೇಷಾದ್ರಿ, ವಸಂತ್ ಮಂಗಳ ಯೋಯಿಸ್ ಹಾಗೂ ಸಂಘದ ಕಾರ್ಯದರ್ಶಿ ಎಂ.ಎಸ್. ಅನಂತ್ ಪ್ರಸಾದ್ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: