ಪ್ರಮುಖ ಸುದ್ದಿ

ಹೋರಾಟ ಸಮಿತಿ ನಿರ್ಧಾರದಂತೆ ಪ್ರತಿಭಟನೆ : ವಿಹೆಚ್‍ಪಿ, ಬಜರಂಗ ದಳ ಸ್ಪಷ್ಟನೆ

ರಾಜ್ಯ(ಮಡಿಕೇರಿ) ನ.8 : – ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಪ್ರತಿಭಟನೆಯ ಕುರಿತು ನಾವು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ, ಬದಲಿಗೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಿರುವುದಾಗಿ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಅವರು, ಕೊಡಗಿನ ಜನತೆಯ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರವನ್ನು ಖಂಡಿಸುವುದಾಗಿ ತಿಳಿಸಿದರು.

ಟಿಪ್ಪುವಿನ ಚರಿತ್ರೆ, ಇತಿಹಾಸದ ಪುಟಗಳನ್ನು ತಿರುವಿದರೆ ಆತನ ಕರಾಳ ಮುಖದ ದರ್ಶನವಾಗುತ್ತದೆ, ಆದರೆ ಅದನ್ನು ಸ್ವೀಕರಿಸುವ ಮನಸ್ಥಿತಿ ಸರಕಾರಕ್ಕಿಲ್ಲ. ಕೊಡಗಿನ ದೇವಾಟ್‍ಪರಂಬುವಿನಲ್ಲಿ ಕೊಡವರ ಹತ್ಯೆ, ಭಾಗಮಂಡಲದಲ್ಲಿ ದೇವಾಲಯ ಭಗ್ನ ಸೇರಿದಂತೆ ನೂರಾರು ಸಾಕ್ಷಿಗಳು ಆತನ ಕರಾಳ ಮುಖವನ್ನು ವಿವರಿಸುತ್ತವೆ. ಆದರೂ ಸರಕಾರ ಆತನನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಿ ಆತನ ಜನ್ಮ ದಿನವನ್ನು ಆಚರಿಸಲು ಮುಂದಾಗಿರುವುದು ಇತಿಹಾಸಕ್ಕೆ ಮಾಡುವ ಅಪಚಾರ ಎಂದು ಟೀಕಿಸಿದರು.

ಆತ ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ, ಶೂರನೂ ಅಲ್ಲ. ತನ್ನ ಉಳಿವಿಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಒಬ್ಬ ಹೇಡಿ. ಆತ ಇಲ್ಲಿನ ಸಂಪತ್ತನ್ನೂ ಕೊಳ್ಳೆ ಹೊಡೆಯುವುದಕ್ಕಾಗಿ, ತನ್ನ ಸಾಮಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದನೇ ಹೊರತು ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲ. ಆತ ಕರ್ನಾಟಕಕ್ಕೆ ಮಾಡಿರುವುದು ಶೇ.99ರಷ್ಟು ಅನ್ಯಾಯವೇ ಹೊರತು ಉಪಕಾರ ಮಾಡಿಲ್ಲ ಎಂದು ನರಸಿಂಹ ಆರೋಪಿಸಿದರು.

ದೇಶಕ್ಕೆ ಕೊಡುಗೆ ನೀಡಿದ ಮಹನೀಯರ ಸ್ಮರಣೆ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಅನ್ಯಾಯ ಮಾಡಿದ ಮತಾಂಧನೊಬ್ಬನ ಜನ್ಮ ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಕಣ್ಣೀರು ಒರೆಸುವ ಬದಲು ಸರಕಾರ ಮತ್ತಷ್ಟು ಕಣ್ಣೀರು ಸುರಿಸಲು ಕಾರಣವಾಗುತ್ತಿರುವುದು ವಿಷಾದನೀಯವೆಂದ ನರಸಿಂಹ, ಸರಕಾರದ ಈ ಕ್ರಮವನ್ನು ವಿಶ್ವಹಿಂದೂ ಪರಿಷದ್ ಉಗ್ರವಾಗಿ ಖಂಡಿಸುವುದಲ್ಲದೆ, ಟಿಪ್ಪು ಜಯಂತಿ ವಿರೋಧಿ ಸಮಿತಿ ಹಮ್ಮಿಕೊಳ್ಳುವ ಪ್ರತಿಭಟನೆಯಲ್ಲಿ ತಮ್ಮ ಸಂಘಟನೆ  ಭಾಗಿಯಾಗುವುದಾಗಿ ಘೋಷಿಸಿದರು.

ವಿದ್ಯಾರ್ಥಿ ಪ್ರಮುಖ್ ವಿನಯ್‍ಕುಮಾರ್ ಮಾತನಾಡಿ, ನ.9ರಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಚೇತನ್, ಸೇವಾ ಪ್ರಮುಖ್ ಪಿ.ಜಿ.ಕಮಲ್, ಗೋರಕ್ಷಾ ಪ್ರಮುಖ್ ನಂದಕುಮಾರ್ ಹಾಗೂ ಮನುಕುಮಾರ್ ರೈ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: