ಪ್ರಮುಖ ಸುದ್ದಿ

ಪಾಲೇಮಾಡು ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

ರಾಜ್ಯ(ಮಡಿಕೇರಿ) ನ.8 :- ದಲಿತರ ‘ಸ್ಮಶಾನ’ಕ್ಕಾಗಿ ಮೀಸಲಿಟ್ಟಿರುವ ಜಾಗದ ದಾಖಲೆಗಳ ದುರಸ್ತಿಗಾಗಿ ಒತ್ತಾಯಿಸಿ ಪಾಲೇಮಾಡು ನಿವಾಸಿಗಳು ಕಳೆದ ಒಂದು ವಾರದಿಂದ ನಡೆಸುತ್ತಿರುವ ಹೋರಾಟವನ್ನು ಜಿಲ್ಲಾಡಳಿತದ ಭರವಸೆಯ ಹಿನ್ನೆಲೆಯಲ್ಲಿ ನ.8 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದೆಂದು ತಿಳಿಸಿರುವ ಬಹುಜನ ಕಾರ್ಮಿಕರ ಸಂಘ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಮೊಣ್ಣಪ್ಪ ಅವರು, ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ಮಶಾನ ಭೂಮಿ ಹೋರಾಟ ಕಳೆದ 3 ವರ್ಷಗಳಿಂದ ಹಂತ ಹಂತವಾಗಿ ನಡೆಯುತ್ತಾ ಬಂದಿದೆ. ಹೋರಾಟದ ಫಲವಾಗಿ ಜಿಲ್ಲಾಡಳಿತ 4 ಏಕರೆ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿದೆ. ಆದರೆ ದಾಖಲೆಯನ್ನು ದುರಸ್ತಿಪಡಿಸದಿರುವುದರಿಂದ ಸ್ಮಶಾನಕ್ಕೆ  ಮಂಜೂರಾದ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ತನ್ನ ವಶದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಕಂದಾಯ ಅಧಿಕಾರಿಗಳ ಬೆಂಬಲವಿದೆ ಎಂದು ಆರೋಪಿಸಿದರು.

ಗೊಂದಲ ನಿವಾರಿಸಿ ಸ್ಮಶಾನದ ಜಾಗವನ್ನು ದಲಿತರಿಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿ ಎರಡು ಬಾರಿ ಶವವನ್ನು ಇಟ್ಟು ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ ಈ ವಿಚಾರವಾಗಿ ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಯಾಗಿದ್ದರು ಸಮಸ್ಯೆ ಬಗೆಹರಿದಿಲ್ಲ. ಆದ್ದರಿಂದ ಕಳೆದ ಒಂದು ವಾರದಿಂದ ಪಾಲೇಮಾಡಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವುದಾಗಿ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮನವಿ ಮಾಡಿರುವ ಕಾರಣ ನ.8 ರಿಂದ ಧರಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಮೊಣ್ಣಪ್ಪ ತಿಳಿಸಿದರು.

ಸ್ಮಶಾನಕ್ಕೆ ಮಂಜೂರಾಗಿರುವ ಜಾಗವನ್ನು ತಮಗೆ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ. ಸಚಿವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ನಮ್ಮ ಬೇಡಿಕೆಗೆ ಮನ್ನಣೆ ದೊರೆತಲ್ಲಿ ಮಾತ್ರ ಹೋರಾಟವನ್ನು ಕೈಬಿಡಲಾಗುವುದು ಎಂದು ಮೊಣ್ಣಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೊದ್ದೂರು ಗ್ರಾ.ಪಂ. ಉಪಾಧ್ಯಕ್ಷೆ ಪಿ.ಎ. ಕುಸುಮಾವತಿ, ಮಾಯಾದೇವಿ ಮಹಿಳಾ ಸಂಘದ ಸದಸ್ಯರುಗಳಾದ ಎಂ. ಲಕ್ಷ್ಮೀ, ಹೆಚ್.ಸಿ.ವೀಣಾ, ಹೆಚ್.ಸಿ.ಮೀರ ಹಾಗೂ ಎಂ.ಅಶ್ವತ್ಥ್ ಮೌರ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: