ಮೈಸೂರು

ಯುವಜನತೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಿ : ಡಿ ರಂದೀಪ್

jaatha-1ಮೈಸೂರಿನ ಮಹಾನಗರ ಪಾಲಿಕೆ ವತಿಯಿಂದ ಸೋಮವಾರ ಬೆಳಿಗ್ಗೆ ನಗರದಲ್ಲಿ ಸ್ವಚ್ಛತಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅಪೊಲೋ ಆಸ್ಪತ್ರೆ ಮತ್ತು ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡ ಸ್ವಚ್ಛತಾ ನಡಿಗೆಗೆ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಯುವಪೀಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ನಮ್ಮ ಸುತ್ತಮುತ್ತಲ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದಲ್ಲದೇ, ಇತರರಿಗೂ ಈ ಕುರಿತು ತಿಳಿಸಬೇಕು. ಪ್ರತಿವರ್ಷವೂ ಮೈಸೂರಿಗೆ ಸ್ವಚ್ಛತಾ ನಗರಿ ಎನ್ನುವ ಪ್ರಶಸ್ತಿ ಸಿಗುವಂತಾಗಬೇಕು ಎಂದರಲ್ಲದೇ, ಇಲ್ಲಿನ ಜನತೆ ನಗರದ ಸ್ವಚ್ಛತೆಗಾಗಿ ಸಹಾಯ, ಸಹಕಾರವನ್ನು ನೀಡಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್ ಮಾತನಾಡಿ, ಮೈಸೂರು ಸ್ವಚ್ಛ ನಗರವಾಗಿದೆ, ಭಾರತದಲ್ಲಿ ಸ್ವಚ್ಛತೆಯಲ್ಲಿ ನಂಬರ್ ಒನ್ ನಗರ ಎಂದು ಗುರುತಿಸಿಕೊಂಡಿದೆ. ಇದನ್ನು ಮುಂದುವರಿಸಿಕೊಂಡು ಹೋಗಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.

ಈ ಸಂದರ್ಭ ಪಾಲಿಕೆಯ ಆಯುಕ್ತ ಜೆ.ಜಗದೀಶ್ ಉಪಸ್ಥಿತರಿದ್ದರು. ಜಾಥಾದಲ್ಲಿ ಸುಮಾರು 300ಕ್ಕೂ ಅಧಿಕ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಥಾ ಕೋಟೆ ಆಂಜನೇಯ ದೇವಾಲಯದ ಮುಂಭಾಗದಿಂದ ಹೊರಟು ಆರ್.ಗೇಟ್, ಟೌನ್’ಹಾಲ್, ಅಶೋಕ ವೃತ್ತದ ಮೂಲಕ ಸಾಗಿ ಬಂತು. ಭಾರತದ ಪ್ರಥಮ ಸ್ವಚ್ಛ ನಗರ ನನ್ನ ಹೆಮ್ಮೆಯ ಮೈಸೂರು, ಪ್ರತಿದಿನ ಹಸಿಕಸ, ಒಣಕಸಗಳನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡಿ, ನಮ್ಮ ಪ್ರಥಮ ಸ್ವಚ್ಛ ನಗರದ ಹೆಸರನ್ನು ಉಳಿಸಿ, ಬೆಳೆಸಿ ಎನ್ನುವ ಫಲಕಗಳನ್ನು ಕೈಯ್ಯಲ್ಲಿ ಹಿಡಿದ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಸಾಗಿದರು.

Leave a Reply

comments

Related Articles

error: