
ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿಲ್ಲದ ಕಾರಣ ರಾಜ್ಯದ ಬಹಳಷ್ಟು ಜಿಲ್ಲೆಗಳು ಬರಪೀಡಿತವಾಗಿವೆ. ಬರುವ ಮಾರ್ಚ್ನಿಂದ ಕುಡಿಯುವ ನೀರಿಗೂ ಆಹಾಕಾರ ಉಂಟಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಮುಂಗಾರಿನಂತೆಯೇ ಹಿಂಗಾರು ಮಳೆಯೂ ವಿಫಲವಾಗಿದ್ದು ಇನ್ನೊಂದು ವಾರದಲ್ಲಿ ಸರ್ಕಾರ ಬರಪೀಡಿತ ತಾಲೂಕುಗಳನ್ನು ಗುರುತಿಸಿ ಘೋಷಣೆ ಮಾಡಲಿದೆ. ಈಗಾಗಲೇ ತೋಟಗಾರಿಕೆ ಮತ್ತು ಹವಾಮಾನ ಇಲಾಖೆಗಳು ಬರಪೀಡಿತ ಪ್ರದೇಶಗಳನ್ನು ಗುರುತಿಸುವ ಕಾರ್ಯಚರಣೆ ನಡೆಸಿವೆ.
ಬಹುತೇಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಿಂಗಾರು ಮಳೆಯಾಶ್ರಯದಿಂದ ಬೆಳೆ ಬೆಳೆಯಲಾಗುತ್ತಿತ್ತು. ಕಳೆದೆರಡು ವರ್ಷಗಳಿಂದಲೂ ನಿರೀಕ್ಷೆಯಂತೆ ಮಳೆಯಾಗದೆ ಬೆಳೆಯೂ ಕೈಕೊಟ್ಟಿದ್ದರಿಂದ ಬಿತ್ತನೆ ಮಾಡಿದ ಬೀಜಗಳು ನೆಲದಿಂದ ಕುಡಿಯೊಡೆದಿಲ್ಲ. ಹೀಗಾಗಿ ರೈತನು ತೀವ್ರ ಸಂಕಷ್ಟಕೀಡಾಗಿದ್ದಾನೆ.
ಕಂದಾಯ, ಹವಾಮಾನ ಮತ್ತು ತೋಟಗಾರಿಕೆ ಇಲಾಖೆಗಳು ಬರಪೀಡಿತ ಪ್ರದೇಶಗಳ ಅಧ್ಯಯನ ನಡೆಸಿ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿವೆ. ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ ಕೇಂದ್ರದ ನೆರವಿಗೆ ಮನವಿ ಮಾಡಲಾಗುವುದು.
ಕಳೆದ ವರ್ಷ ರಾಜ್ಯದ 62 ತಾಲ್ಲೂಕುಗಳನ್ನು ಬರಪೀಡತವೆಂದು ಘೋಷಣೆ ಮಾಡಲಾಗಿದ್ದು, ಈಗಾಗಲೇ ಮುಂಗಾರು ಹಂಗಾಮಿನ ಮಳೆ ಕೊರತೆಯಿಂದಾಗಿ ಸುಮಾರು 139 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆ ಕೈಕೊಟ್ಟಿರುವುದರಿಂದ ಮೂಲಭೂತ ಸೌಕರ್ಯಗಳಿಗೂ ನೀರಿನ ಅಭಾವ ಎದುರಾಗಬಹುದು. ಜಾನುವಾರುಗಳಿಗೆ ಸಮರ್ಪಕ ಮೇವು ಮತ್ತು ಕುಡಿಯುವ ನೀರು ಒದಗಿಸುವ ದೊಡ್ಡ ಸವಾಲು ರಾಜ್ಯ ಸರ್ಕಾರಕ್ಕೆ ಸವಾಲಾಗಲಿದೆ.