
ಮೈಸೂರು
ಮೈನವಿರೇಳಿಸಿದ ಸಾಹಸ ಪ್ರದರ್ಶನ
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ವಿದ್ಯಾರ್ಥಿಗಳ ಸಾಹಸ ದೃಶ್ಯಗಳು ಮೈನವಿರೇಳಿಸುತ್ತಿವೆ.
ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಿಶ್ವಸಂಸ್ಕೃತಿಯನ್ನು ಪ್ರತಿಬಿಂಬಿಸಿದರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಯೋಗಪಟುಗಳು ಮಲ್ಲಕಂಬ ಪ್ರದರ್ಶಿಸಿದರು. ಸರಸರನೆ ಕಂಬ ಏರುತ್ತಿದ್ದರೆ ನೋಡುಗರ ಕಣ್ಣಲ್ಲಿ ಭಯದ ಛಾಯೆ ಆವರಿಸುತ್ತಿತ್ತು.
ವಿವಿಧ ರಾಜ್ಯಗಳಿಂದಾಗಮಿಸಿದ ವಿದ್ಯಾರ್ಥಿಗಳು ಪಿರಮಿಡ್ ನಿರ್ಮಿಸುವುದು, ಒಬ್ಬರ ಮೇಲೆ ಒಬ್ಬರು ನಿಂತು ಗೋಡೆಯಾಕಾರ ನಿರ್ಮಿಸಿ ಅದರ ಮೇಲೆ ನಿಂತ ಹುಡುಗ ರಾಷ್ಟ್ರ ಧ್ವಜವನ್ನು ಹಿಡಿದು ಹಾರಾಡಿಸಿ ಸೆಲ್ಯೂಟ್ ಮಾಡುವುದು, ಪರಸ್ಪರ ಎದುರು ಬದುರಾಗಿ ನೆಗೆಯುವುದು, ತಲೆಕೆಳಗಾಗಿ ನಿಲ್ಲುವ ಕಸರತ್ತುಗಳು ನೋಡುಗರನ್ನು ಚಕಿತಗೊಳಿಸಿದವು.
ತೆಲಂಗಾಣ ತಂಡದವರು ನಡೆಸಿದ ನೃತ್ಯ ಪ್ರದರ್ಶನ ಮುದ ನೀಡಿತು. ಸೋಮವಾರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಾಹಸ ಪ್ರದರ್ಶನ, ಪಥಚಲನ ಸ್ಪರ್ಧೆ ನಡೆಯಲಿದೆ.