
ದೇಶಪ್ರಮುಖ ಸುದ್ದಿ
ಜಾತಿ-ಧರ್ಮದ ಆಧಾರದಲ್ಲಿ ಮತ ಕೇಳುವಂತಿಲ್ಲ: ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ
ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಜಾತಿ-ಮತ-ಧರ್ಮದ ಆಧಾರದಲ್ಲಿ ಮತ ಕೇಳುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಠಾಕೂರ್ ನೇತೃತ್ವದ ಸುಪ್ರೀಂಕೋರ್ಟ್’ನ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದ್ದು, “ಯಾವುದೇ ರಾಜಕೀಯ ಪಕ್ಷದ ನಾಯಕರು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಗಳು ಜಾತಿ-ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ. ಚುನಾವಣೆಯಲ್ಲಿ ಜಾತ್ಯತೀತ ತತ್ವಗಳ ಆಧಾರದ ಮೇಲೆ ಮತ ಯಾಚಿಸಬೇಕು” ಎಂದು ಸ್ಪಷ್ಟ ನಿರ್ದೇಶನ ನೀಡಿದೆ.
ರಾಜಕೀಯ ಪಕ್ಷಗಳು ನಿರ್ದಿಷ್ಟ ಜಾತಿ-ಧರ್ಮ-ಸಮುದಾಯವನ್ನು ತಮ್ಮ ಓಟ್ಬ್ಯಾಂಕ್ಗಾಗಿ ಓಲೈಸುತ್ತಿರುವುದು ಗುಟ್ಟೇನಲ್ಲ. ಸುಪ್ರೀಂಕೋರ್ಟ್’ನ ಇಂದಿನ ತೀರ್ಪಿನಿಂದಾಗಿ ಜಾತಿ-ಧರ್ಮ ಓಲೈಸುವ ಸಲುವಾಗಿ ರಾಜಕೀಯ ಪಕ್ಷಗಳ ಪ್ರಚೋದನಾತ್ಮಕ ನಾಟಕಕ್ಕೆ ತೆರೆ ಬೀಳಬಹುದು ಎಂದು ನಿರೀಕ್ಷಿಸಲಾಗಿದ್ದು, ಉತ್ತರ ಪ್ರದೇಶದ ಚುನಾವಣೆಗೆ ಪೂರ್ವಭಾವಿಯಾಗಿ ಈ ತೀರ್ಪು ಹೊರಬಿದ್ದಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಚುನಾವಣೆ ಸಂದರ್ಭದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡುವುದು ಜಾತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಏಳು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠವು ವಾದ-ಪ್ರತಿವಾದಗಳನ್ನು ಆಲಿಸಿ ರಾಜಕಾರಣಿಗಳು ಜ್ಯಾತ್ಯಾತೀತರಾಗಿರಬೇಕು ಎಂಬ ನಿರ್ಧಾರರನ್ನು ಸಮರ್ಥಿಸಿತು.
ನ್ಯಾಯಪೀಠದಲ್ಲಿದ್ದ 7 ನ್ಯಾಯಮೂರ್ತಿಗಳಲ್ಲಿ ನಾಲ್ವರು ನ್ಯಾಯಾಧೀಶರು ಜಾತಿ ಆಧಾರಿತ ಮತಯಾಚನೆಗೆ ವಿರೋಧ ವ್ಯಕ್ತಪಡಿಸಿದರು. ಇನ್ನುಳಿದ ಮೂವರು ಜಾತಿ ಆಧಾರಿತ ಮತಯಾಚನೆ ಪರವಾಗಿದ್ದರು. ಅಂತಿಮವಾಗಿ ಬಲಾಬಲದ ಮೇಲೆ ಜಾತ್ಯತೀತ ವಾದಕ್ಕೆ ಗೆಲುವು ದೊರೆಯಿತು.
ಈ ತೀರ್ಪು ಉತ್ತರಪ್ರದೇಶ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೂ ಮಾರ್ಗಸೂಚಿ ಜಾರಿ ಮಾಡಿದಂತಾಗಿದೆ. ಅಭಿವೃದ್ಧಿ ವಿಷಯಗಳ ಆಧಾರದ ಮೇಲೆ ಮತಯಾಚನೆ ಮಾಡಬೇಕು ಎಂಬುದು ಈ ತೀರ್ಪಿನ ಸಾರಾಂಶವಾಗಿದ್ದು, ಚುನಾವಣೆ ಸಂದರ್ಭ ಜಾತಿ-ಧರ್ಮ ಕೇಂದ್ರಿತ ಮಾತುಗಳನ್ನಾಡುತ್ತಿದ್ದ ರಾಜಕೀಯ ಪಕ್ಷಗಳ ನಡವಳಿಕೆಗೆ ಕಡಿವಾಣ ಹಾಕಿದಂತಾಗಿದೆ.