ಪ್ರಮುಖ ಸುದ್ದಿ

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ : ಸೂಕ್ತ ಕ್ರಮಕ್ಕೆ ಸಲಫಿ ಮೂವ್‍ ಮೆಂಟ್ ಒತ್ತಾಯ

ರಾಜ್ಯ(ಮಡಿಕೇರಿ) ನ.10 : – ಪ್ರವಾದಿ ಅವರಿಗೆ ಅಗೌರವ ತೋರುವ ಮೂಲಕ ಕೆಲವರು ಧಾರ್ಮಿಕ ಭಾವನೆಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿ ಮೂಡಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸೌತ್ ಕರ್ನಾಟಕ ಸಲಫಿ ಮೂವ್‍ ಮೆಂಟ್‍ನ ಮಡಿಕೇರಿ ಹಾಗೂ ನಾಪೋಕ್ಲು ಘಟಕ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಘಟಕದ ಅಧ್ಯಕ್ಷ ಎಂ.ಇ.ರಿಯಾಜ್, ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ರಾಜಕೀಯ ಪಕ್ಷಗಳ ದಲ್ಲಾಳಿಗಳು ಪ್ರವಾದಿಗಳನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದರು. ಶಾಂತಿ, ಸೌಹಾರ್ದತೆಯ ಕೊಡಗು ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರವಾದಿಗಳಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನರಿಗೆ ಅಗೌರವ ತೋರಿ ಕೆಲವರು ಹೇಳಿಕೆ ನೀಡಿದ್ದು, ಈ ಕುರಿತು ಪತ್ರಿಕೆಯೊಂದು ವರದಿ ಮಾಡಿದೆ. ರಾಜಕೀಯ ದಲ್ಲಾಳಿಗಳಿಂದ ಉಂಟಾದ ಒಟ್ಟು ಪ್ರಕರಣದಿಂದ ಇಡೀ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ರಿಯಾಜ್ ತಕ್ಷಣ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಎ.ಅನಾಸ್, ಸಹ ಕಾರ್ಯದರ್ಶಿ ಷಂಶುದ್ದೀನ್, ಎಂ.ಇ.ಮುಸ್ತಫ, ನಾಪೋಕ್ಲುವಿನ ನವಾಜ್ ಹಂಸ ಹಾಗೂ ಪಿ.ಎ.ಮೊಹಮ್ಮದ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: