ಪ್ರಮುಖ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ ಮತ್ತು ಕೋಮುವಾದದಲ್ಲಿ ತೊಡಗಿದೆ : ಸೀತಾರಾಂ ಯೆಚೂರಿ ವಾಗ್ದಾಳಿ

ರಾಜ್ಯ(ಕೊಪ್ಪಳ)ನ.10:-  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ ಮತ್ತು ಕೋಮುವಾದದಲ್ಲಿ ತೊಡಗಿದೆ ಎಂದು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಾಗ್ದಾಳಿ ನಡೆಸಿದ್ದಾರೆ.

ಕಾರ್ಲ್‌ ಮಾರ್ಕ್ಸ್ ದ್ವಿಶತಮಾನೋತ್ಸವ ಹಾಗೂ ಅವರ ಮೇರು ಕೃತಿ ‘ಬಂಡವಾಳ’ದ 150ನೇ ವರ್ಷಾಚರಣೆ ಪ್ರಯುಕ್ತ ಸಿಪಿಐಎಂ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಚುನಾವಣೆ ಗೆಲ್ಲುವುದಕ್ಕಾಗಿ ಮೋದಿ ನೋಟು ಅಮಾನ್ಯೀಕರಣ ಅಸ್ತ್ರವನ್ನು ಬಳಸುತ್ತಿದ್ದಾರೆ. ಆದರೆ ಅಮಾನ್ಯೀಕರಣದಿಂದ ದೇಶದ ಕೋಟ್ಯಂತರ ಜನರಿಗೆ ನಷ್ಟವಾಗಿದೆ. ಇದರಿಂದ ದೇಶ ಹಿಂದುಳಿದಿದೆ. ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಬಡವರು, ಕಾರ್ಮಿಕರು, ವ್ಯಾಪಾರಸ್ಥರು ನರಳುತ್ತಿದ್ದಾರೆ. ಇದು ರಫೆಲ್‌ಗಿಂತ ದೊಡ್ಡ ಹಗರಣ ಎಂದು ಕಿಡಿಕಾರಿದರು. ಮೋದಿ ದೇಶದಲ್ಲಿ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಹಿಂದೂ- ಮುಸ್ಲಿಂರ ನಡುವೆ ಭೇದ ಮೂಡಿಸುತ್ತಿದ್ದಾರೆ. ಮತಗಳಿಗಾಗಿ ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು. ದೇಶ ಬಡವಾಗುತ್ತಿದೆ. ಹಾಗಾಗಿ ಜಾತ್ಯಾತೀತ ಸರಕಾರ ರಚನೆಯಾಗಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಜಿಎಸ್ಟಿ ಕೂಡ ದೇಶಕ್ಕೆ ನಷ್ಟ ತಂದಿದೆ ಹೊರತು ಲಾಭ ತಂದಿಲ್ಲ. ಜಿಎಸ್ಟಿಯಿಂದ ಎಷ್ಟು ತೆರಿಗೆ ಹಣ ಸಂಗ್ರಹವಾಗಿದೆ ಎಂದು ಮೋದಿ ಹೇಳಲು ಸಿದ್ಧವಿಲ್ಲ. ಜಿಎಸ್ಟಿಯಿಂದ ರಾಜ್ಯ‌ ಮತ್ತು ಕೇಂದ್ರ ಸರಕಾರಗಳ ನಡುವೆ ಸಾಮರಸ್ಯ ಕೆಟ್ಟಿದೆ. ಕೇರಳದಲ್ಲಾದ ಪ್ರವಾಹದ ಹಾನಿಗೆ ಕೇಂದ್ರದ ಮುಂದೆ ಭಿಕ್ಷೆ ಬೇಡುವ ಸ್ಥಿತಿಯನ್ನು ರಾಜ್ಯ ಸರಕಾರಕ್ಕೆ ತಂದಿಟ್ಟರು ಎಂದು ದೂರಿದರು.

ಫಸಲ್ ಬಿಮಾ ಯೋಜನೆ ರೈತರಿಗೆ ಲಾಭವಾಗುವ ಬದಲು, ವಿಮಾ ಕಂಪನಿಗಳಿಗೆ ಲಾಭ ಆಗಿದೆ. ಈವರೆಗೆ ರೈತರ ಖಾತೆಗೆ ಎಷ್ಟು ಹಣ ಬಂದಿದೆ ಎಂದು ಮೋದಿ ಹೇಳಬೇಕು. ದೇಶದಲ್ಲಿ ರೈತರ ಆತ್ಮಹತ್ಯೆ ಬಹಳಷ್ಟು ವೇಗವಾಗಿದೆ. ಬಹುಶಃ ಇದರ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ಇಲ್ಲ ಅನಿಸುತ್ತೆ. ಅವರೇನಿದ್ದರೂ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ದುಡಿಯುತ್ತಿದ್ದಾರೆ ಎಂದು ಟೀಕಿಸಿದರು. ಇಂತಹ ಜನವಿರೋಧಿ ಸರಕಾರ ಕಿತ್ತೊಗೆಯಲು ರಾಷ್ಟ್ರದಾದ್ಯಂತ ಚಳವಳಿ ಹಮ್ಮಿಕೊಳ್ಳಲಾಗುವುದು. ಅಲ್ಲದೆ, ಇವರನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಗುರಿಯೊಂದಿಗೆ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನಕ್ಕೆ ನಮ್ಮ ಸಹಮತವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಟಿಪ್ಪು ಸುಲ್ತಾನ್ ರದ್ದು ಕರ್ನಾಟಕಕ್ಕೆ ಅಷ್ಟೇ ಅಲ್ಲ ದೇಶಕ್ಕೂ ಕೊಡುಗೆ ಇದೆ. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ ಟಿಪ್ಪು. ಭೂತಕಾಲದ ಕತ್ತಲಲ್ಲಿ ಬದುಕುವುದು ಬೇಡ. ಜಯಂತಿ ಆಚರಣೆ ಮಾಡುವುದು ಸೂಕ್ತವಾಗಿದೆ. ಇದನ್ನು ವಿರೋಧಿಸುವುದು ತಪ್ಪು ಎಂದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: