ಪ್ರಮುಖ ಸುದ್ದಿ

ಟಿಪ್ಪು ಜಯಂತಿ ಸರಕಾರದ ಆಚರಣೆ ನಾವು ಮಧ್ಯೆ ಪ್ರವೇಶಿಸುವುದಿಲ್ಲ : ಹೈಕೋರ್ಟ್‌

ರಾಜ್ಯ(ಬೆಂಗಳೂರು)ನ.10:- ಟಿಪ್ಪು ಜಯಂತಿ ಸರಕಾರದ ಆಚರಣೆ. ಇದರಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದ್ದು, ಈ ಮೂಲಕ ಟಿಪ್ಪು ವಿರೋಧಿಗಳಿಗೆ ತೀವ್ರ ಮುಖಭಂಗ ಎದುರಾಗಿದೆ.

ರಾಜ್ಯ ಸರಕಾರದ ವತಿಯಿಂದ ನಡೆಸುವ ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಬೇಕು ಎಂದು ಕೋರಿ ಕೊಡಗು ಜಿಲ್ಲೆಯ ಕೆ.ಪಿ.ಮಂಜುನಾಥ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಪವನಚಂದ್ರ ಶೆಟ್ಟಿ ಮಾತನಾಡಿ, ಸರಕಾರ 2015 ರಿಂದ ಟಿಪ್ಪು ಜಯಂತಿ ಆಚರಿಸುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಬೊಕ್ಕಸದಿಂದ 60 ಲಕ್ಷ ರೂ. ಖರ್ಚು ಮಾಡುತ್ತಿದೆ. ಈ ಹಿಂದೆ ಆಚರಣೆ ವೇಳೆ ಕೊಡಗಿನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆದ್ದರಿಂದ, ಆಚರಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಟಿಪ್ಪು ಜಯಂತಿಗೆ ಎರಡು ದಿನ ಇದೆ ಎನ್ನುವಾಗ ಅರ್ಜಿ ಸಲ್ಲಿಸುತ್ತೀರಿ. ಸರಕಾರ ಈಗಾಗಲೇ ನಿಮ್ಮ ಮನವಿಯನ್ನು ತಿರಸ್ಕರಿಸಿದೆ. ಅದರೆ, ನೀವು ಸರಕಾರದ ಈ ನಿರ್ಧಾರವನ್ನೇ ಈತನಕ ಪ್ರಶ್ನಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.

ಈ ಹಿಂದೆಯೂ ಹೈಕೋರ್ಟ್ ನಿಮ್ಮ ಮನವಿ ಪರಿಗಣಿಸಿಲ್ಲ. ಮಧ್ಯಂತರ ತಡೆಯನ್ನೂ ನೀಡಿರಲಿಲ್ಲ. ಈಗಲೂ ಅದನ್ನು ಪ್ರಶ್ನಿಸದೇ ಮತ್ತೆ ತಡೆ ಕೇಳುವುದು ಸರಿಯಲ್ಲ. ನೀವು ನಿಮ್ಮ ಮಿತಿ ಮೀರುತ್ತಿದ್ದೀರಿ ಎಂದು ಕಿಡಿಕಾರಿದ ಪೀಠ, ಇದು ಸರಕಾರದ ಆಚರಣೆ. ಇದರಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿತು. ಬಳಿಕ ಈ ವಿಚಾರಣೆಯನ್ನು ಪೀಠ ಮೂರು ವಾರಗಳ ಕಾಲ ಮುಂದೂಡಿ ಆದೇಶ ಹೊರಡಿಸಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: