ಮೈಸೂರು

ಕಳ್ಳತನಕ್ಕೆ ಹೊಸಮಾರ್ಗ ಕಂಡುಕೊಂಡ ಖದೀಮ : ಕಿಟಕಿಯಿಂದಲೇ ಚಿನ್ನಾಭರಣ ದೋಚಿ ಪರಾರಿ

ಮೈಸೂರು,ನ.10:- ಬಾಗಿಲು ಮುರಿದು ಒಳನುಗ್ಗುವುದು ಹಳೆಯ ಸ್ಟೈಲ್ ಆಯಿತು ಎಂದುಕೊಂಡಂತಿರುವ ಕಳ್ಳರು ಇದೀಗ ಕಿಟಕಿಯ ಮೂಲಕ ಕಳ್ಳತನ ನಡೆಸಲು ಮುಂದಾಗಿದ್ದಾರೆ.  ಬಾಗಿಲು ತೆರೆದಿರುವ ಕಿಟಕಿಯ ಮೂಲಕ ಕೈ ಹಾಕಿ ಸುಮಾರು 5ಲಕ್ಷರೂ.ಮೌಲ್ಯದ ಚಿನ್ನಾಭರಣವನ್ನು ಕಳ್ಳನೋರ್ವ ದೋಚಿದ ಘಟನೆ ಬನ್ನಿಮಂಟಪದ ಸಿ.ಬಡಾವಣೆಯಲ್ಲಿ ನಡೆದಿದೆ.

ಬನ್ನಿಮಂಟಪದ ಸಿ ಬಡಾವಣೆಯಲ್ಲಿನ ಮಹಮ್ಮದ್ ರುಮ್ಮನ್ ಖಾನ್ ಎಂಬವರ ನಿವಾಸದಲ್ಲಿಯೇ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಮಹಮ್ಮದ್ ರುಮ್ಮನ್ ಖಾನ್  ಬೆಂಗಳೂರಿನಲ್ಲಿ ವಾಸವಿದ್ದು ಕೆಲಸದ ನಿಮಿತ್ತ ಮೈಸೂರಿಗೆ ಆಗಮಿಸಿ ತಮ್ಮ ತಾಯಿಯ ಮನೆಯಲ್ಲಿ ತಂಗಿದ್ದರು. ನ.6ರಂದು ರಾತ್ರಿ ಕಳ್ಳನೋರ್ವ ಬಾಗಿಲು ತೆರೆದಿದ್ದ ಕಿಟಕಿಯ ಒಳಗೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್ ನಿಂದ ಸುಮಾರು 125ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳು, ಸುಮಾರು 40ಗ್ರಾಂ ತೂಕದ 4ಉಂಗುರ, 15,000ರೂ ನಗದನ್ನು ದೋಚಿದ್ದಾನೆ. ಆದರೆ ಕಳುವಾಗಿರುವುದು ಅವರ ಗಮನಕ್ಕೆ ಬರಲಿಲ್ಲ. ಮರುದಿನ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗಿನಲ್ಲಿಟ್ಟ ಒಡವೆ ಹಾಗೂ ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಎನ್ ಆರ್.ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲಿಸಿದಾಗ ವ್ಯಕ್ತಿಯೋರ್ವ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈತ ತನ್ನ ಚಪ್ಪಲಿ ಕಳಚಿ ಮೆಟ್ಟಿಲು ಹತ್ತಿ ಕೈನಲ್ಲಿ ಒಂದು ಪೈಪ್ ಹಾಗೂ ಅದರ ತುದಿಗೆ ಒಂದು ಮೊಳೆ ಹೊಡೆದು ವೈಯರ್ ಕಟ್ಟಿದ್ದು, ಇದರ ಸಹಾಯದಿಂದ ಕಿಟಕಿಯ ಸರಳುಗಳಿಂದಲೇ ವ್ಯಾನಿಟಿ ಬ್ಯಾಗ್ ತೆಗೆದು ಅಲ್ಲಿಂದಲೇ ಹಣ, ಒಡವೆ ತೆಗೆದು ಬಳಿಕ ಬ್ಯಾಗ್ ನ್ನು ಯಥಾಸ್ಥಿತಿಯಲ್ಲಿರಿಸಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್ ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: