ಕರ್ನಾಟಕಪ್ರಮುಖ ಸುದ್ದಿಮೈಸೂರು

ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಪಕ್ಷ ಬಲಿಷ್ಠವಾಗಲಿದೆ : ಡಿವಿಎಸ್ ವಿಶ್ವಾಸ

ಶ್ರೀನಿವಾಸ ಪ್ರಸಾದ್ ಒಬ್ಬ ಅದ್ಭುತ ರಾಜಕಾರಣಿ. ಅವರು ಅಭಿವೃದ್ಧಿ ಪರವಾಗಿದ್ದವರು. ಜನರ ಆಶೋತ್ತರಗಳಿಗೆ ಸ್ಪಂದಿಸುವಂತವರು. ಅವರೀಗ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಯೋಜನಾ ಮತ್ತು ಅಂಕಿ ಅಂಶಗಳ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಭಾರತೀಯ ಜನತಾಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭ ಉಪಸ್ಥಿತರಿದ್ದ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮೈಸೂರು ಭಾಗದಲ್ಲಿ ನಮಗೆ ಸ್ವಲ್ಪ ಹಿನ್ನಡೆಯಿತ್ತು. ಪ್ರಸಾದ್ ಸೇರ್ಪಡೆಯಿಂದ ಆ ಕೊರತೆ ನೀಗಿದೆ. ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ. ಕಾಂಗ್ರೆಸ್ ಸರ್ಕಾರವಿನ್ನು ಮುಗಿದ ಅಧ್ಯಾಯ ಎಂದರು.

ಪ್ರಸಾದ್ ಸಚಿವರಾಗಿದ್ದ ಸಂದರ್ಭ ನಾನು ವಿಪಕ್ಷ ನಾಯಕನಾಗಿ ಟೀಕೆ ಮಾಡಿರಲಿಲ್ಲ. ಆದರೆ ಬೇರೆ ಕೆಲವರ ಬಗ್ಗೆ ಆರೋಪ ಮಾಡಿದ್ದೆ. ಅಂಥವರನ್ನೆಲ್ಲ ಸಿದ್ದರಾಮಯ್ಯ ಇನ್ನೂ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಅಭಿವೃದ್ಧಿ ಕೆಲಸ ಆಗಬೇಕಾದರೆ ಹೇಗೆ ಮಾಡಬೇಕು ಎಂಬುದಕ್ಕೆ ಅವರು ಮಾದರಿ. ಚುನಾವಣೆಗೆ ಮೊದಲೇ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದು ತಿಳಿಯಲಿದೆ. ರಾಜಕೀಯ ಧೃವೀಕರಣ ಆರಂಭವಾಗಿದೆ. ಈ ಧೃವೀಕರಣದಿಂದ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಪ್ರಸಾದ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ. ಹೊಸ ವರ್ಷದ ಎರಡನೆ ದಿನ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರ್ಪಡೆಗೊಂಡಿರುವುದು ಹೊಸ ವರ್ಷದ ಶುಭದಾಯಕ ಘಟನೆ ಎಂದರು.

ಶ್ರೀನಿವಾಸ ಪ್ರಸಾದ್ ಅವರು ಸ್ವಾಭಿಮಾನಕ್ಕೆ ಧಕ್ಕೆ ಬಂದ ಕಾರಣ ಕಾಂಗ್ರೆಸ್ ಪಕ್ಷವನ್ನು ಬಿಟ್ಟರು. ಸಿದ್ದರಾಮಯ್ಯ ಸರ್ಕಾರದಲ್ಲಿ ಹಲವಾರು ಭ್ರಷ್ಟ ಸಚಿವರಿದ್ದಾರೆ. ಆದರೆ ಶ್ರೀನಿವಾಸ ಪ್ರಸಾದ್ ಪ್ರಾಮಾಣಿಕರು. ಸಿದ್ದರಾಮಯ್ಯ ಭ್ರಷ್ಟರನ್ನು ಸಚಿವ ಸ್ಥಾನದಲ್ಲಿ ಉಳಿಸಿಕೊಂಡಿದ್ದಾರೆ. ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಇದೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗುತ್ತಿದೆ. ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್’ಗೆ ಎಟಿಎಂ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಅನಿವಾರ್ಯವಾಗಿ ಉಳಿಸಿಕೊಂಡಿದ್ದಾರೆ. 2018 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಯಡಿಯೂರಪ್ಪ ಸಿ.ಎಂ ಆಗುವುದು ಸೂರ್ಯಚಂದ್ರರಷ್ಟೇ ಸತ್ಯ ಎಂದು ತಿಳಿಸಿದರು.

ಬಿಜೆಪಿ ಮಾಜಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮಾತನಾಡಿ, ಅಂಬೇಡ್ಕರ್ ಅವರಿಂದ ಮೊದಲ್ಗೊಂಡು ಶ್ರೀನಿವಾಸ್ ಪ್ರಸಾದ್’ವರೆಗೆ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಅಂದು ಅಂಬೇಡ್ಕರ್’ರನ್ನು ಸೋಲಿಸಿದರು. ದೆಹಲಿಯಲ್ಲಿ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ. ಉತ್ತಮರು ಕಾಂಗ್ರೆಸ್ ಪಕ್ಷದಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಮೋದಿಯವರ ಕನಸಿನ ಭಾರತ ನಿರ್ಮಾಣವಾಗಲಿದ್ದು, ಶ್ರೀನಿವಾಸ್ ಪ್ರಸಾದ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿದರು. ಈ ಸಂದರ್ಭ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಮಾಜಿ ಸಚಿವರಾದ ಉದಾಸಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಶ್ರೀನಿವಾಸ್ ಪ್ರಸಾದ್ ಸಹೋದರ ರಾಮಸ್ವಾಮಿ, ಮೈಸೂರು ಮುಡಾ ಮಾಜಿ ಅಧ್ಯಕ್ಷ ಮೋಹನಕುಮಾರ, ಬಸವೇಗೌಡ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಗೊಂಡರು.

Leave a Reply

comments

Related Articles

error: