ಮೈಸೂರುಸಿಟಿ ವಿಶೇಷ

ದಸರಾ ಉತ್ಸವದಲ್ಲಿ ಗಮನ ಸೆಳೆಯಲಿದೆ ಬಾಡಿ ಆರ್ಟ್

ಸಾಂಸ್ಕೃತಿಕ ನಗರಿ ಮೈಸೂರು ಪರಿಸರ ಸ್ನೇಹಿ ನಗರ ಎಂದೇ ಗುರುತಿಸಲ್ಪಟ್ಟಿದೆ. ಇಲ್ಲಿ ಪ್ಲಾಸ್ಟಿಕ್ ವರ್ಜ್ಯ. ಏನೇ ಮಾಡುವುದಿದ್ದರೂ ಇಲ್ಲಿ ಪರಿಸರ ಸ್ನೇಹಿಯಾಗಿರಬೇಕು. ಇಲ್ಲಿನ ಜನರು ಕಲೆಯ ಆರಾಧಕರು. ಅದಕ್ಕೆ ಪುಷ್ಟಿ ನೀಡುವಂತೆ ಈ ಬಾರಿ ದಸರಾ ಉತ್ಸವದಲ್ಲಿ ಮೈಸೂರು ದಸರಾದ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಅಂತರಾಷ್ಟ್ರೀಯ ಖ್ಯಾತಿಯ ‘ಬಾಡಿ ಆರ್ಟ್’ ಅನ್ನು ಪರಿಚಯಿಸುತ್ತಿದೆ.

amazing-body-art-1-1

‘ಬಾಡಿ ಆರ್ಟ್’ (ದೇಹ ಚಿತ್ರಕಲೆ) ಕುರಿತು ಹಲವರಿಗೆ ತಿಳಿದಿರಲಿಕ್ಕಿಲ್ಲ. ಮೈಮೇಲೆ ಯಾವುದೋ, ಪ್ರಾಣಿ ಅಥವಾ ಪಕ್ಷಿ, ಪರಿಸರ ಇವುಗಳ ಕುರಿತ ಚಿತ್ರವನ್ನು ಬಣ್ಣಗಳಲ್ಲಿ ರಚಿಸಿಕೊಳ್ಳುವ ಒಂದು ಕಲೆ. ಮಂಗಳೂರು ದಸರಾ ನೋಡಲು ಹೋದವರು ಖಂಡಿತ ಇದನ್ನು ನೋಡಿರುತ್ತಾರೆ. ಯಾಕೆಂದರೆ ದಸರಾ ನಡೆಯುವ 10 ದಿನಗಳ ಕಾಲವೂ ಮೈಮೇಲೆ ಹುಲಿಯ ಚಿತ್ರವನ್ನು ಬಣ್ಣಗಳಿಂದ ಬಳಿದುಕೊಂಡು ಕುಣಿಯುವ ಗುಂಪುಗಳು ಅಲ್ಲಿನ ಬೀದಿ ಬೀದಿಗಳಲ್ಲಿ ಕಂಡುಬರುತ್ತವೆ.

bodyartsnake

ಈ ಬಾರಿಯ ದಸರಾ ಉತ್ಸವದಲ್ಲಿಯೂ ಅಂತಹ ಒಂದು ಕಲೆ ಅನಾವರಣವಾಗಲಿದೆ. ಇಷ್ಟು ದಿನ ಟಿವಿಗಳಲ್ಲಿ ನೃತ್ಯ ಕಾರ್ಯಕ್ರಮಗಳಲ್ಲಿ ದೇಹವೀಡಿ ಬಣ್ಣ ಬಳಿದ ದೃಶ್ಯವನ್ನು ನೋಡಿದವರಿಗೆ ಆಕರ್ಷಕ ಕಲೆಯನ್ನು ಖುದ್ದು ನೋಡುವಂತಹ ಅವಕಾಶ ಒದಗಿ ಬರಲಿದೆ. ಈ ಕುರಿತು ದಸರಾದ ಲಲಿತಕಲೆ ಮತ್ತು ಕರಕುಶಲ ಸಮಿತಿಯ ಕಾರ್ಯಾಧ್ಯಕ್ಷ, ಕಾವಾ ಡೀನ್ ಬಸವರಾಜ ಮುಸವಳಿಗೆ ಅವರನ್ನು ‘ಸಿಟಿಟುಡೆ’ ಸಂಪರ್ಕಿಸಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು.

 

ಎಲ್ಲಿ..? ಯಾವಾಗ..?

ಅಕ್ಟೋಬರ್ 3 ರಂದು ‘ಬಾಡಿ ಆರ್ಟ್’ ಸ್ಪರ್ಧೆ ಕಲಾಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಕಲೆಯು ಪರಿಸರ ಸ್ನೇಹಿಯಾಗಿದ್ದು, ಜನರಲ್ಲಿ ಪರಿಸರ ಕಾಳಜಿ, ಜಾಗೃತಿ ಮೂಡಿಸುವುದೇ ಈ ಕಲೆಯ ಉದ್ದೇಶ.

ದಸರಾದಲ್ಲಿ ಇದೇ ಮೊದಲಬಾರಿಗೆ ಆಯೋಜನೆಯಾಗಿರುವ ಬಾಡಿಆರ್ಟ್‍ ಸ್ಪರ್ಧೆ ಜನತೆಯನ್ನು ಆಕರ್ಷಿಸಸಲ್ಲದೇ?

ವಿಭಿನ್ನವಾಗಿ ಮಾಡಬೇಕು ಅನ್ನೋ ಉದ್ದೇಶದಿಂದ ನಡೆಸುತ್ತಿದ್ದೇವೆ.  ಕಲಾಮಂದಿರದಲ್ಲಿ ಸಾರ್ವಜನಿಕರ ಎದುರೇ ಈ ಕಲೆ ಅನಾವರಣಗೊಳ್ಳಲಿದೆ. ಬೆಳಿಗ್ಗಿನಿಂದ ಸಾಯಂಕಾಲದವರೆಗೂ ಜನರಿಗೇ ನೋಡೋ ಅವಕಾಶ ಸಿಗತ್ತೆ. ಅದಕ್ಕಾಗಿ ಅವರಿಗೆ ಕಿರಿಕಿರಿಯಾಗದ ರೀತಿಯಲ್ಲಿ ನೈಸರ್ಗಿಕ ಬಣ್ಣಗಳನ್ನೇ ಬಳಸಲು ಹೇಳಿದ್ದೇವೆ. ನೀರು, ಪ್ರಕೃತಿ, ಪರಿಸರ ಇವುಗಳ ಕುರಿತು ಜಾಗೃತಿ ಮೂಡಿಸಿ, ಬೆಳಕು ಚೆಲ್ಲುವ ಚಿತ್ರಗಳಿಗೆ ಆದ್ಯತೆ. ಸಾರ್ವಜನಿಕರಿಗೆ ಮುಜುಗರವಾಗುವಂತಹ ಯಾವುದೇ ಕಲೆಯನ್ನು ರಚಿಸಿಕೊಳ್ಳಬಾರದೆಂದು ಸೂಚನೆ ನೀಡಲಾಗಿದೆ.

ವಯಸ್ಸಿನ ಮಿತಿ? ಸ್ತ್ರೀ-ಪುರುಷ..?

ಯಾವುದೇ ಮಿತಿ ಇಲ್ಲ. ದೃಶ್ಯಕಲಾ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು. ಆದರೆ ಯಾರಿಗೂ ಮುಜುಗರವಾಗದಂತೆ ನೋಡಿಕೊಳ್ಳಬೇಕು.  ಪ್ಲಾಸ್ಟಿಕ್ ಬಳಕೆಗೆ ಅವಕಾಶವಿಲ್ಲ. ಬಾಡಿ ಆರ್ಟ್ ಮಾತ್ರವಲ್ಲದೇ ಚಿತ್ರಕಲೆ, ಶಿಲ್ಪಕಲೆ, ಕರಕುಶಲ ಕಲೆ ಸೇರಿದಂತೆ ಹಲವು ಕಲಾಪ್ರಕಾರಗಳು ಇಲ್ಲಿ ಸಾಕಾರಗೊಳ್ಳಲಿವೆ. ಸ್ಪರ್ಧೆಗೆ ಬೇಕಾಗುವ ಸಾಮಗ್ರಿಗಳ ಕನಿಷ್ಠ ವೆಚ್ಚವನ್ನು ಸಮಿತಿ ಭರಿಸಲಿದೆ. ಆಯ್ಕೆಯಾದ 5 ತಂಡಗಳಿಗೆ ಅವಕಾಶ. ಅವರಲ್ಲಿ ಮತ್ತೆ ಯಾರು ಚೆನ್ನಾಗಿ ಮಾಡಿರುತ್ತಾರೋ ಅವರಿಗೆ ಪ್ರಥಮ ಬಹುಮಾನ ನೀಡಲಾಗುವುದು.

ಒಟ್ಟಿನಲ್ಲಿ ಈ ಬಾರಿ ದಸರಾ ಉತ್ಸವದಲ್ಲಿ ಪರಿಸರ ಜಾಗೃತಿ ಮೂಡಿಸುವ ಬಾಡಿ ಆರ್ಟ್ ಗಮನ ಸೆಳೆಯಲಿದೆಯೇ? ಕಾದು ನೋಡಬೇಕಷ್ಟೆ.

 

 

Leave a Reply

comments

Related Articles

error: