ಕರ್ನಾಟಕಪ್ರಮುಖ ಸುದ್ದಿ

ರಾಷ್ಟ್ರದ ಉಳಿವಿಗೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕಿದೆ: ಎಚ್.ಡಿ.ರೇವಣ್ಣ

ಹಾಸನ (ನ.10): ರಾಷ್ಟ್ರವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಟಿಪ್ಪು ಸುಲ್ತಾನ್ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು ಬ್ರಿಟೀಷ್ ಸಾಮ್ರಾಜ್ಯದ ವಿರುದ್ದ ಪ್ರಭಲ ಹೋರಾಟ ಪ್ರಾರಂಭಿಸಿದ್ದೇ ಟಿಪ್ಪು ಸುಲ್ತಾನ್ ಅವರು ಎಂದರು.

ಟಿಪ್ಪು ಮೂರು ಬಾರಿ ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ್ದರು. ಈ ಯುದ್ದಗಳು ಆಂಗ್ಲೋ-ಮೈಸೂರು ಯುದ್ದಗಳೆಂದೇ ಇತಿಹಾಸದಲ್ಲಿ ದಾಖಲಾಗಿವೆ ಎಂದ ಸಚಿವರು ಟಿಪ್ಪು ಕೇವಲ ಒಂದು ಧರ್ಮಕ್ಕೆ ಸೀಮಿತರಾದ ನಾಯಕರಾಗಿ ನೋಡಬಾರದು. ಅವರು ಶೃಂಗೇರಿ, ನಂಜನಗೂಡು, ಮೇಲುಕೋಟೆಯ ಹಿಂದು ದೇವಾಲಯಗಳಿಗೂ ಸಾಕಷ್ಟು ನೆರವು ನೀಡಿದ್ದಾರೆ ಎಂದರು.

ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ದ ಹೋರಾಡಿ ನಾಡಿನ ರಕ್ಷಣಿಗಾಗಿ ತನ್ನರೆಡು ಮಕ್ಕಳನ್ನು ಒತ್ತೆ ಇಟ್ಟಿದ್ದರು. ತನ್ನ ಸಾಮ್ರಾಜ್ಯದ ಜನರ ನೆಮ್ಮದಿ ಹಾಗೂ ಸುಖಕ್ಕಾಗಿ ಹೊರಾಡುತ್ತಲೇ ಯುದ್ದ ಭೂಮಿಯಲ್ಲಿ ವೀರಮರಣ ಹೊಂದಿದ್ದ ಅವರ ವೀರ ಪರಂಪರೆಯನ್ನು ಗೌರವಿಸಬೇಕಿದೆ. ಟಿಪ್ಪು ಸುಲ್ತಾನ್ ರಾಕೆಟ್ ತಂತ್ರಜ್ಞಾನದ ಜನಕರೂ ಹಾಗೂ ಎರಡನೇ ಆಂಗ್ಲೋ ಇಂಡಿಯನ್ ಯುದ್ದದಲ್ಲಿ ರಾಕೆಟ್ ತಂತ್ರಜ್ಞಾನ ಬಳಸಿದ ಟಿಪ್ಪು ಬ್ರಿಟೀಷರ ನಿದ್ದೆಗೆಡಿಸಿದ್ದರು. ಟಿಪ್ಪು ದಕ್ಷ ಆಡಳಿತಗಾರ, ಅತ ಬಹು ಮುಖಿ ಸಂಸ್ಕೃತಿಯ ಆರಾಧಕ ಕೂಡ ಅಗಿದ್ದರು ಎಂದರು.

ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಕೃಷಿಗೆ ಆದ್ಯತೆ ಇತ್ತು. ಕಾವೇರಿ ನದಿಗೆ ಮೊದಲ ಅಣೆಕಟ್ಟು ಕಟ್ಟಿದ್ದು ಟಿಪ್ಪು, ಅದೇ ಜಾಗದಲ್ಲಿ ನಂತರ ಕೆ.ಆರ್.ಎಸ್. ನಿರ್ಮಾಣವಾಯಿತು. ಕರ್ನಾಟಕ್ಕೆ ರೇಷ್ಮೆ ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನರದ್ದು. ಬೆಂಗಳೂರಿನಲ್ಲಿ ಪ್ರಪ್ರಥಮ ಜೈವಿಕ ಉದ್ಯಾನ ಲಾಲಾಭಾಗ್ ಅಭಿವೃದ್ದಿ ಪಡಿಸಿದ್ದು ಟಿಪ್ಪು ಸುಲ್ತಾನ್.ಸ್ಥಳೀಯವಾಗಿ ಮದ್ಯಮಾರಾಟ ನಿಷೇಧಿಸಿದ್ದರು.

ನೂರಾರು ವರ್ಷ ಇಲಿಯಂತೆ ಬದುಕುವ ಬದಲು 3 ದಿನ ಹುಲಿಯಂತೆ ಬದುಕುತ್ತೇನೆ ಎಂದು ಸದಾ ಹೇಳುತ್ತಿದ್ದ ಟಿಪ್ಪು ಸುಲ್ತಾನ್ ಅವರು ಹಾಗೇ ಬದುಕಿ ವೀರನಾಗಿ ಹುತಾತ್ಮರಾದರು. ಮೈಸೂರು ಸಂಸ್ಥಾನದ 156 ದೇವಸ್ಥಾನಗಳಿಗೆ ಆರ್ಥಿಕ ನೆರವು ನೀಡಿದ ಸಂಗತಿಗಳು ದಾಖಲಾಗಿವೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿ 50 ಕೋಟಿ ರೂ ವೆಚ್ಚದಲ್ಲಿ ಅಲ್ಪ ಸಂಖ್ಯಾತರಿಗೆ ಪ್ರಥಮ ದರ್ಜೆ ಕಾಲೇಜು ಮಾಡಲಾಗುವುದು ಎಂದು ತಿಳಿಸಿದ ಸಚಿವರು ಹೆಣ್ಣು ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಪಿ.ಯು. ಕಾಲೇಜು ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಕೋಸ್ಕರ ಹೋರಾಟ ಮಾಡಿದವರ ಜನ್ಮ ಜಯಂತಿಯನ್ನು ಆಚರಿಸುವುದು ಹೆಮ್ಮೆ ವಿಷಯವಾಗಿದೆ ಎಂದರು. ಟಿಪ್ಪು ಸುಲ್ತಾನ್ ಅವರು ಸಕಲ ಧರ್ಮಗಳನ್ನು ಸಮಾನತೆಯಿಂದ ಕಾಣುತ್ತಿದ್ದರು. ಅವರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.

ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಹೆಚ್.ಎಲ್. ಮಲ್ಲೇಶ್‍ಗೌಡ ಅವರು ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್. ಪ್ರಕಾಶ್ ಗೌಡ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಡಿ.ವೈ.ಎಸ್.ಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಹಾಗೂ ಮುಸಲ್ಮಾನ ಧರ್ಮದ ವಿವಿಧ ಮುಖಂಡರುಗಳು ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ನಿನ್ನೆ ನಿಧನರಾದ ಸಾಹಿತಿ ಪ್ರಗತಿಪರ ಚಿಂತಕರಾದ ಜ.ಹೊ.ನಾರಾಯಣಸ್ವಾಮಿ ಅವರ ಆತ್ಮಕ್ಕೆ ಮೌನ ಆಚರಿಸುವ ಮೂಲಕ ಶಾಂತಿ ಕೋರಲಾಯಿತು. (ಎನ್.ಬಿ)

Leave a Reply

comments

Related Articles

error: