ಕರ್ನಾಟಕಪ್ರಮುಖ ಸುದ್ದಿಮೈಸೂರು

ಮುಕ್ತ ಮನಸ್ಸಿನಿಂದ ಬಿಜೆಪಿ ಸೇರುತ್ತಿದ್ದೇನೆ : ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟನೆ

bjp-1ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಹೊಗಳಿದ್ದೇ ನನ್ನನ್ನು ಸಚಿವ ಸಂಪುಟದಿಂದ ಕೈಬಿಡಲು ಕಾರಣವಾಯಿತು. ಇದು ನನ್ನ ರಾಜಕೀಯ ಜೀವನದ ಕೊನೆಯ ದಿನಗಳಾಗಿದ್ದು, ಮುಕ್ತಮನಸ್ಸಿನಿಂದ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸ್ಪಷ್ಟಪಡಿಸಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸೋಮವಾರ ವಿ.ಶ್ರೀನಿವಾಸ ಪ್ರಸಾದ್ ಅವರು ಅಧಿಕೃತವಾಗಿ ಬಿಜೆಪಿ ಸೇರಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶ್ರೀನಿವಾಸ್ ಪ್ರಸಾದ್ ಅವರಿಗೆ ಹೂಗುಚ್ಛ ಹಾಗೂ ಪಕ್ಷದ ಧ್ವಜ ನೀಡಿ, ಸಿಹಿ ತಿನ್ನಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಅಷ್ಟೇ ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ನೀಡಿದರು.

ಅಧಿಕೃತವಾಗಿ ಪಕ್ಷ ಸೇರಿದ ಬಳಿಕ ಮಾತನಾಡಿದ ವಿ.ಶ್ರೀನಿವಾಸ ಪ್ರಸಾದ್, ನಾನು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದೇನೆ. ರಾಜಕೀಯದಲ್ಲಿ ಎಷ್ಟು ಮೇಲಕ್ಕೆ ಹೋದರೂ ಕೆಳಗೆ ಬರಲೇ ಬೇಕು. ಜನರ ಬಳಿಗೆ ಬರಲೇ ಬೇಕು. ಇದು ಪ್ರಜಾಪ್ರಭುತ್ವದ ನಿಯಮ. ಇದನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ನಾನು ಸ್ವಾಭಿಮಾನಿ ರಾಜಕಾರಣಿ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿಗಳಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದೆ. ಮಂತ್ರಿ ಸ್ಥಾನದಿಂದ ಕೈಬಿಡುವ ಮೊದಲು ನನ್ನನ್ನು ಕೇಳಬೇಕಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಖರ್ಗೆ, ದಲಿತ ವರ್ಗದಲ್ಲಿ ಸಾಕಷ್ಟು ಸ್ಥಾನಮಾನ ಪಡೆದವರು. ರಾಜಕೀಯ ಸ್ಥಾನಮಾನವನ್ನು ಪಡೆದವರು. ಆದರೂ ಖರ್ಗೆಗೆ ಇನ್ಮೂ ತೃಪ್ತಿಯಾಗಿಲ್ಲ. ನನ್ನನ್ನು ಸಚಿವ ಸ್ಥಾನದಿಂದ ಕಿತ್ತಾಕಿದಾಗ ಖರ್ಗೆ ಯಾಕೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಲಿಲ್ಲ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಅಹಿಂದ ಅಂದ್ರೆ ತಮ್ಮ ಜಾತಿ ಒಂದಕ್ಕೆ ಬ್ರಾಂಡ್ ಆಗಿ ಬಿಡುತ್ತೇನೆ ಎಂಬ ಭಯದಿಂದ ಸಿದ್ದರಾಮಯ್ಯ ನನ್ನ ಮನೆ ಬಾಗಿಲಿಗೆ ಬಂದು ಕೈ ಮುಗಿದು ಕೇಳಿಕೊಂಡು ಅಹಿಂದ ಗುಂಪಿಗೆ ಸೇರಿಸಿಕೊಂಡಿದ್ದರು. ನಾನು ಎಂದೂ ಮಂತ್ರಿ ಮಾಡಿ ಎಂದು ಅವರನ್ನು ಕೇಳಿಕೊಂಡಿಲ್ಲ. ಬಾಬು ಜಗಜೀವನರಾಮ್ ಅವರನ್ನು ಬಿಟ್ಡರೆ ಅತಿ ಹೆಚ್ಚು ಕಾಲ ಅಧಿಕಾರ ಅನುಭವಿಸಿರುವವರು ಮಲ್ಲಿಕಾರ್ಜುನ ಖರ್ಗೆ. ಆದರೂ ಅವರಿಗೆ ತೃಪ್ತಿಯಿಲ್ಲ. ತಮ್ಮ‌ಮಗನನ್ನು ಸಚಿವನನ್ನಾಗಿ ಮಾಡೋದಕ್ಕೆ ನನ್ನ ಕೈ ಬಿಟ್ಟರು. ಪರಮೇಶ್ವರ ಅವರಂತೂ ಕೆಪಿಸಿಸಿ ಅಧ್ಯಕ್ಷರೋ ಅಥವಾ ಕಿವುಡ ಮೂಕರ ಶಾಲೆಯ ಮೇಸ್ಟರೋ ಅಂತ ತಿಳಿಯುತ್ತಿಲ್ಲ. ನನ್ನ ಮಂತ್ರಿ ಮಂಡಲದಿಂದ ಕೈ ಬಿಟ್ಟಾಗ ಖರ್ಗೆಯವರಾಗಲೀ, ಪರಮೇಶ್ವರ ಅವರಾಗಲಿ ಯಾಕೆ ಅಂತ ಪ್ರಶ್ನಿಸಲಿಲ್ಲ. ನನಗೆ ರಾಜಕಾರಣ ಸಾಕು. ಇನ್ನು ಎರಡು ವರ್ಷ ರಾಜಕೀಯದಲ್ಲಿರುತ್ತೇನೆ ಅಂತ ಹೇಳಿದ್ದೆ. ಆದರೂ ನನ್ನನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದೀರಿ. ಸಿದ್ದರಾಮಯ್ಯ ಅವರಿಗೆ ಅಸೂಯೆ ಬುದ್ಧಿ ಎಂದು ಟೀಕಿಸಿದರು.

ದಲಿತರು, ಹಿಂದುಳಿದವರು ಬಿಜೆಪಿಯನ್ನು ಬೆಂಬಲಿಸದೇ ಇದ್ದಿದ್ದರೆ, ಬಿಜೆಪಿ ಸಂಸತ್ ನಲ್ಲಿ ಅಷ್ಟೊಂದು ಬಹುಮತ ಗಳಿಸುತ್ತಿರಲಿಲ್ಲ ಎಂದು ಪ್ರಸಾದ್ ಅಭಿಪ್ರಾಯಪಟ್ಟರು. ಈ ಸಂದರ್ಭ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Leave a Reply

comments

Related Articles

error: