
ಮೈಸೂರು
ಕಲಾವಿದರು ಕಲೆಯಿಂದ ವಿಮುಖರಾಗುತ್ತಿದ್ದಾರೆ : ಡಾ.ತುಳಸಿ ರಾಮಚಂದ್ರ ವಿಷಾದ
ಕಲಾವಿದರಿಗೆ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಅವರು ಕಲೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹಿರಿಯ ಕಲಾವಿದೆ ಡಾ.ತುಳಸಿರಾಮಚಂದ್ರ ವಿಷಾದ ವ್ಯಕ್ತಪಡಿಸಿದರು.
ಮೈಸೂರಿನ ರಂಗಾಯಣದ ಶ್ರೀರಂಗದಲ್ಲಿ ಸೋಮವಾರ ಜಿಲ್ಲಾಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ಸ್ಪರ್ಧೆಯನ್ನು ಡಾ.ತುಳಸಿರಾಮಚಂದ್ರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಲಾವಿದರು ಹಿಂದೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದರು. ಇಂದಿಗೂ ಅವರ ಸ್ಥಿತಿಯೇನೂ ಬದಲಾಗಿಲ್ಲ. ಹಿಂದೆ ಜನತೆ ನಾಟಕಗಳನ್ನು ನೋಡುತ್ತಿದ್ದರು. ಆದರೆ ಇಂದು ನಾಟಕ ನೋಡುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ರಂಗಭೂಮಿಗೆ ಪ್ರೋತ್ಸಾಹವೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುರು ಪರಂಪರೆಯಿಂದ ನಡೆದುಕೊಂಡು ಬಂದಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ಮುಂದಿನ ಪೀಳಿಗೆಗೂ ಈ ಕಲೆಯನ್ನು ಉಳಿಸಿಕೊಂಡು ಹೋಗುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಕಂಸಾಳೆ ಕುಮಾರಸ್ವಾಮಿ, ರಂಗಾಯಣದ ಉಪನಿರ್ದೆಶಕಿ ನಿರ್ಮಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.