ಪ್ರಮುಖ ಸುದ್ದಿ

ರಾಮಮಂದಿರ ನಿರ್ಮಿಸದಿದ್ದರೆ ಬಿಜೆಪಿ ವಿರುದ್ಧ ಮತದಾನಕ್ಕೆ ಕರೆ : ಗೋಣಿಕೊಪ್ಪದಲ್ಲಿ ಪ್ರಮೋದ್ ಮುತಾಲಿಕ್ ಎಚ್ಚರಿಕೆ

ರಾಜ್ಯ(ಮಡಿಕೇರಿ) ನ.13 :- ಅಭಿವೃದ್ಧಿ ಮತ್ತು ಹಿಂದುತ್ವದ ನೆಲೆಯಲ್ಲಿ ಮತದಾರರು ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಈ ಬಾರಿ ಚುನಾವಣೆಗೂ ಮೊದಲು ಅಯೋಧ್ಯೆ ರಾಮ ಮಂದಿರಕ್ಕೆ ಚಾಲನೆ ನೀಡದಿದ್ದಲ್ಲಿ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಲು ಶ್ರೀ ರಾಮಸೇನೆ ಕರೆ ನೀಡಲಿದೆ ಎಂದು ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಸ್ತ ಹಿಂದೂಗಳ ಭಾವನೆಯ ಪ್ರತೀಕವಾದ ರಾಮಮಂದಿರ ನಿರ್ಮಾಣ ಆಗಲೇಬೇಕೆಂದು ಒತ್ತಾಯಿಸಿದರು. ಧಾರ್ಮಿಕ ನಂಬಿಕೆಗಳ ಕುರಿತು ಕೋರ್ಟ್ ತೀರ್ಪು ನೀಡುವ ಸಂದರ್ಭ ಆಯಾ ಧರ್ಮದ ಹಿರಿಯರ ನಿರ್ಧಾರಕ್ಕೆ ಮನ್ನಣೆ ನೀಡುವುದು ಸೂಕ್ತವೆಂದು ಶಬರಿಮಲೆ ವಿವಾದದ ಕುರಿತು ಅವರು ಅಭಿಪ್ರಾಯ ಪಟ್ಟರು. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಟಿಪ್ಪು ಜಯಂತಿಯನ್ನು ಸ್ವತಃ ಮುಸ್ಲಿಮರೇ ವಿರೋಧಿಸಿದ್ದು, ವರ್ಷದಿಂದ ವರ್ಷಕ್ಕೆ ಈ ಜಯಂತಿ ಕಳೆಗುಂದುತ್ತಿದೆ. ಮುಂದಿನ ವರ್ಷ  ಟಿಪ್ಪು ಜಯಂತಿ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು.

ಕೇವಲ ಮತ ಬ್ಯಾಂಕ್‍ಗಾಗಿ ಆಚರಿಸಿಕೊಳ್ಳುತ್ತಿರುವ ಈ ಜಯಂತಿಗೆ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳದಿರುವುದು ಆತ್ಮಸಾಕ್ಷಿಗೆ ಹಿಡಿದ ಕೈಗನ್ನಡಿಯಾಗಿದೆ. ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಿರುವವರು ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳಲಿ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ, ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸರ್ಕಾರವೇ ರೂಪಿಸಿ ಅದರಲ್ಲಿ ಪಾಲ್ಗೊಳ್ಳದಿರುವುದು ಅವರು ಆ ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಪದಾಧಿಕಾರಿಗಳಾದ ಗಣೇಶ ಹಾಗೂ ಅಶೋಕ್ ರೈ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: