ಮೈಸೂರು

ಸೈಟು ಹಂಚಿಕೆಯಲ್ಲಿ ಅಕ್ರಮ : ನಿವೇಶನ ವಂಚಿತರ ಆರೋಪ

ಮೈಸೂರು, ನ.13:-  ತಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದ ಪರಿಶಿಷ್ಟರಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ತಹಶೀಲ್ದಾರ್ ಅವರ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದ್ದು, ಸೈಟು ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು ಇದಕ್ಕೆ ಮಾದಾಪುರ ಗ್ರಾ.ಪಂ.ಪಿಡಿಓ ಲಿಂಗರಾಜು ಕಾರಣ ಎಂದು ನಿವೇಶನ ವಂಚಿತರು ಆರೋಪಿಸಿದ್ದಾರೆ.

ನಿನ್ನೆ ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನಿವೇಶನ ವಂಚಿತರಲ್ಲಿ ಒಬ್ಬರಾದ ಗೀತಾ ಮಾತನಾಡಿ, ಗ್ರಾಮದಲ್ಲಿ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಲು ದಿನಾಂಕ:3-5-2017ರಂದು ಗ್ರಾಮ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ಸರ್ಕಾರಿ ಭೂಮಿ ಒಂದು ಎಕರೆ ಮೂವತ್ತ ನಾಲ್ಕು ಗುಂಟೆ (74ಗುಂಟೆ) ಜಮೀನಿನಲ್ಲಿ 30*40 ಅಡಿ ಅಳತೆ ನಿವೇಶನ ನೀಡುವ ಬಗ್ಗೆ ತೀರ್ಮಾನಿಸಿ ಸಭೆಯಲ್ಲಿ 50ಮಂದಿ ಅರ್ಹರನ್ನು ಗುರುತಿಸಲಾಗಿತ್ತು. ಆದರೆ ತದ ನಂತರ ಪಿಡಿಒ ಲಿಂಗರಾಜುರವರು ಗ್ರಾಮದ ಕೆಲವರ ಚಿತಾವಣೆ ಮೇರೆಗೆ ಅನರ್ಹರ ಆಮಿಷಕ್ಕೊಳಗಾಗಿ ನೀವೇಶನವುಳ್ಳವರನ್ನು ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಸೇರಿಸಿ ಒಟ್ಟು 74ಮಂದಿಗೆ ಹಂಚಿಕೆ ಮಾಡಿ ಕೆಲವು ಅರ್ಹರನ್ನು ಕೈಬಿಟ್ಟಿದ್ದಾರೆ. ಜತೆಗೆ ಗ್ರಾಮದ ಕೆಲವು ಗ್ರಾ.ಪಂ.ಸದಸ್ಯರು ಮನೆ, ನಿವೇಶನ ಉಳ್ಳವರಾಗಿದ್ದರೂ ಅಕ್ರಮವಾಗಿ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಂಡಿದ್ದು, ಸೈಟು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ವಂಚಿತರು ದೂರು ಕೊಟ್ಟಿರುವುದರಿಂದ ಹೊಸದಾಗಿ ಬಂದ ತಹಶೀಲ್ದಾರ್ ಹಕ್ಕುಪತ್ರ ನೀಡುವ ಮುನ್ನ ಪರಿಶೀಲಿಸುವುದಾಗಿ ಹೇಳಿದ್ದರಿಂದ ಇವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿದ್ದಾರೆ ಎಂದರು.

ಉದಯಕುಮಾರ್ ಮಾತನಾಡಿ, ಪಿಡಿಒರವರು ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ 30*40ಅಡಿ ನಿವೇಶನಗಳಿಗೆ ಬದಲಾಗಿ 26*33 ಅಡಿ ನಿವೇಶನಗಳನ್ನಾಗಿ ಗುರುತಿಸಿ ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ವಿಸ್ತೀರ್ಣವನ್ನು ಕಡಿಮೆಗೊಳಿಸಿ ಅನರ್ಹರಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ನಿಯಮಾವಳಿಗಳ ಪ್ರಕಾರ ಬಡಾವಣೆ ನಿರ್ಮಿಸಬೇಕಾದರೆ ರಸ್ತೆ, ಚರಂಡಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಆದರೆ ಗ್ರಾ.ಪಂ.ಪಿಡಿಓರವರು ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಬಡಾವಣೆ ನಿರ್ಮಿಸಿ ರಸ್ತೆಯನ್ನು ಚಿಕ್ಕದು ಮಾಡಿ ಅನರ್ಹರಿಗೂ ನಿವೇಶನ ಸಿಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ನಿವೇಶನ ವಂಚಿತ ಅರ್ಹ ಫಲಾನುಭವಿಗಳು ಜಿಲ್ಲಾಧಿಕಾರಿಗಳಿಗೆ ಸದರಿ ಪಿಡಿಓ ಅವರ ವಿರುದ್ಧ ದೂರನ್ನು ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಆ ಅರ್ಜಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದುವರೆಗೂ ಇಓ ಆಗಲಿ ಗ್ರಾ.ಪಂ.ಪಿಡಿಓ ಆಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಈ ಬಗ್ಗೆ ತಾಲೂಕು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮತ್ತೊಮ್ಮೆ ಗ್ರಾಮಸಭೆ ನಡೆಸಿ ಅರ್ಹರನ್ನು ಗುರುತಿಸಿ, ಅನರ್ಹರನ್ನು ಕೈಬಿಟ್ಟು ನಿವೇಶನ ಹಂಚಿಕೆಯಾಗಲಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ, ಉದಯಕುಮಾರ, ಕುಮಾರ, ಪ್ರಸಾದ್, ಗೀತಾ, ಮಂಗಳಮ್ಮ, ಕೆಂಪಮ್ಮ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: