ಪ್ರಮುಖ ಸುದ್ದಿ

ಸಚಿವ ಅನಂತಕುಮಾರ್ ನಿಧನದಿಂದ ಕೇಂದ್ರ ಸರ್ಕಾರದೊಂದಿಗಿನ ಪ್ರಮುಖ ಕನ್ನಡದ ಕೊಂಡಿ ಕಳಚಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಂತಾಪ

ರಾಜ್ಯ(ಬೆಂಗಳೂರು)ನ.13:- ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದಿಂದ ಕೇಂದ್ರ ಸರ್ಕಾರದೊಂದಿಗಿನ ಪ್ರಮುಖ ಕನ್ನಡದ ಕೊಂಡಿಯೊಂದು ಕಳಚಿದ್ದು, ಇದು ಭಾಷೆಯ ಹಿತದೃಷ್ಟಿಯಿಂದ ತುಂಬಲಾರದ ನಷ್ಟ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರು ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕೇಂದ್ರ ಸರ್ಕಾರದಲ್ಲಿ ಕನ್ನಡದ ಕೆಲಸವಾಗಬೇಕೆಂದರೆ ಅದು ಅನಂತ್ ಕುಮಾರ್ ಅವರನ್ನು ಕೇಳಿದರೆ ಸಾಕು ಎನ್ನುವ ಮಟ್ಟಿಗಿನ ಕನ್ನಡ ಕಾಳಜಿ ಅವರದ್ದಾಗಿತ್ತು. ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನದ ವಿಷಯ, ಕೇಂದ್ರ ಸರ್ಕಾರ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗೆ ಸಿಗಬೇಕಿದ್ದ ಪ್ರಾತಿನಿಧ್ಯ ಇವುಗಳ ಬಗ್ಗೆ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಪ್ರತಿಬಾರಿ ದೆಹಲಿಗೆ ಭೇಟಿ ನೀಡಿದಾಗಲೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿಸಿ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಕಾಣಿಸಲು ಅನಂತ್ ಕುಮಾರ್ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದರು. ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಭಾಷೆ ಸಂಸ್ಕೃತಿಯ ಪ್ರಶ್ನೆ ಬಂದಾಗ ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿದ್ದ ಅವರ ಬದ್ಧತೆ ಬೇರೆಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾಗಿ ಎಂದಿಗೂ ಉಳಿಯುತ್ತದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: