ಪ್ರಮುಖ ಸುದ್ದಿಮೈಸೂರು

ನ.16ರಿಂದ ಕಿವಿರೋಗ ತಜ್ಞರ 27ನೇ ರಾಷ್ಟ್ರೀಯ ಸಮ್ಮೇಳನ ‘ಐಸೋಕಾನ್’

ಮೈಸೂರು,ನ.14 : ಜೆಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಭಾರತೀಯ ಕರ್ಣಶಾಸ್ತ್ರ ಮೈಸೂರು ವಿಭಾಗ (The Indian society of otology)  ಜಂಟಿಯಾಗಿ ಕಿವಿ ರೋಗ ತಜ್ಞರ  27ನೇ ರಾಷ್ಟ್ರೀಯ ಸಮ್ಮೇಳನ ‘ಐಸೋಕಾನ್’ ಅನ್ನು  ನ.16 ರಿಂದ 18ರವರೆಗೆ ಏರ್ಪಡಿಸಲಾಗಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಂ.ಬಿ.ಭಾರತಿ ತಿಳಿಸಿದರು.

ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಮ್ಮೇಳನ ನಡೆಯುತ್ತಿದ್ದು ಅಂತರಾಷ್ಟ್ರೀಯ ಮಟ್ಟದ ಕಿವಿ ರೋಗದ ತಜ್ಞರಾದ ಡಾ.ಜವೀರ್ ಗವಿಲಾನ್, ಡಾ.ಲಿವೆಂಟ್ ಸೆನ್ನಾರೊಗ್ಲು, ಡಾ.ಮುವಾಜ್ ತಾರಾಬೀಚಿ, ಡಾ.ಎನ್.ರಿಕೊ ಪಿಕರಿಲೊ ಹಾಗೂ ದೇಶದ ಖ್ಯಾತ ತಜ್ಞ ವೈದ್ಯರಾದ ಡಾ.ರವಿ ರಾಮಲಿಂಗಂ, ಡಾ.ದೀಪಕ್ ಹಳದೀಪುರ್ ಅಪ್ಪಾರವ್, ಡಾ.ವಿಶ್ವನಾಥನ್, ಡಾ.ಶಂಕರ್ ಮಡಿಕೇರಿ, ಡಾ.ವಿಜಯೇಂದ್ರ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಮಾನಸಗಂಗೋತ್ರಿಯ ಸೆನಟ್ ಭವನದಲ್ಲಿ ನಡೆಯುವ ಸಮ್ಮೇಳನದ ಉದ್ಘಾಟನೆಯು ನ.16ರ ಮಧ್ಯಾಹ್ನ 12.30ರಂದು ನಡೆಯಲಿದ್ದು ಮುಖ್ಯ ಅತಿಥಿಯಾಗಿ ಐಸೋಕಾನ್ ಸಂಸ್ಥಾಪಕ ಅಧ್ಯಕ್ಷ ಪ್ರೊ.ಡಾ.ಕೆ.ಕೆ.ರಾಮಲಿಂಗಂ ಭಾಗಿಯಾಗಲಿದ್ದಾರೆ. ಎಂಎಂಸಿಆರ್ಐ ನ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಜೆಎಸ್ಎಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಹೆಚ್.ಬಸವನಗೌಡಪ್ಪ ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಡೆಯುವ ಕಿವಿಸೋರುವಿಕೆಯ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು ಮಾನಸಗಂಗೋತ್ರಿಯ ಸೆನೆಟ್ ಹಾಲಿನಲ್ಲಿ ಭಿತ್ತರಿಸಲಾಗುವುದು,

ದೇಶದ ನಾನಾ ಭಾಗದಿಂದ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ವೈದ್ಯರು, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎ.ಆರ್.ಬಾಬು, ಕಾರ್ಯದರ್ಶಿ ಡಾ.ಬಿ.ಎಸ್.ರಾಕೇಶ್, ಸಹ ಸಂಯೋಜಕಿ ಡಾ.ಸಂಧ್ಯಾ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: