ಮೈಸೂರು

ಕೊಡಗಿನ ನೀರು ಪಡೆಯುವ ತಮಿಳುನಾಡು ನ್ಯಾಯ ತುಂಬ ಬೇಕಲ್ಲವೇ : ಸಾಹಿತಿ ಎಸ್.ಎಲ್.ಭೈರಪ್ಪರಿಂದ ಸಿಎಂ ಗೆ ಪತ್ರ

ಮೈಸೂರು,ನ.15:- ಕೊಡಗಿನ ನೀರನ್ನು ಸದಾ ಬಳಸುವ, ನೀರು ಸಿಗದಿದ್ದರೆ ತಗಾದೆ ತೆಗೆದು ಕೇಂದ್ರ ಸರ್ಕಾರ, ನ್ಯಾಯಾಲಯದ ಮೊರೆ ಹೋಗುವ ತಮಿಳುನಾಡು, ಈಗ ಭಾರೀ ಮಳೆ ಆ ಮೂಲಕ ನೆರೆಯಿಂದ ಕೊಡಗಿನಲ್ಲಿ ಉಂಟಾಗಿರುವ ಭಾರೀ ಹಾನಿಯನ್ನು ತುಂಬಿಕೊಡಬೇಕಲ್ಲವೇ ಎಂದು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ಹುಚ್ಚು ಮಳೆ ಮತ್ತು ಬಿರುಗಾಳಿಯಿಂದ ಕೊಡಗಿನಲ್ಲಿ ಆಗಿರುವ ಹಾನಿ ಅದಕ್ಕೆ ಕರ್ನಾಟಕ ಸರ್ಕಾರವು ಮಾಡಬೇಕಾಗಿರುವ ಸಾವಿರಾರು ಕೋಟಿ ರೂಪಾಯಿ ಖರ್ಚು ಹಾಗೂ ಸಾರ್ವಜನಿಕರೂ ಕೊಡುತ್ತಿರುವ ದೇಣಿಗೆಗಳು ಸರ್ವವಿಧಿತ. ಹುಚ್ಚು ಮಳೆಯಾಗಲಿ, ಸಾಧಾರಣ ಮಳೆಯಾಗಲಿ ಕಾದು ಕುಳಿತಂತೆ ತಗಾದೆ ಮಾಡಿ ನೀರನ್ನು ಕಬಳಿಸುವ, ಅದಕ್ಕಾಗಿ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವನ್ನು ಒತ್ತಾಯಿಸುವ ತಮಿಳುನಾಡು ಕೊಡಗಿನ ನೀರು ಬೇಕು ಆದರೆ ಅದರ ಹಾನಿಯನ್ನು ತುಂಬಲು ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಈ ಅಂಶಗಳನ್ನು ಒಳಗೊಂಡು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕಾಗಲೀ, ಸಂಬಂಧಿಸಿದ ಟ್ರಿಬ್ಯುನಲ್ ಅಥವಾ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ನನ್ನ ಭಾವನೆ. ತಮ್ಮ ಹಕ್ಕೊತ್ತಾಯವನ್ನು ಈಗ ಮನ್ನಿಸದೆ ಇದ್ದರೂ ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ಮಾಡುವಾಗ ಈ ಅಂಶವನ್ನು ಸೇರಿಸಲು ಇದು ಆಧಾರವಾಗುತ್ತದೆ. ಈ ಬಗೆಗೆ ತಾವು ತಕ್ಷಣ ಕಾರ್ಯೋನ್ಮುಖರಾಗುವಿರೆಂಬ ಭರವಸೆಯಿಂದ ಈ ಪತ್ರವನ್ನು ಬರೆದಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: