ಮೈಸೂರು

ಗುರಿ ಇದ್ದಲ್ಲಿ ಕಾರ್ಯ ಸಾಧನೆ ಸುಲಭ : ಧರಣಿದೇವಿ ಮಾಲಗತ್ತಿ ಸಲಹೆ

savitri-2ಜೀವನದಲ್ಲಿ ಗುರಿ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಗುರಿ ಇದ್ದಾಗ ಮಾತ್ರ ಕಾರ್ಯ ಸಾಧನೆ ಸುಲಭ ಎಂದು ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಧರಣಿದೇವಿ ಮಾಲಗತ್ತಿ ತಿಳಿಸಿದರು.

ಮೈಸೂರಿನ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಾನವ ಬಂಧುತ್ವ ವೇದಿಕೆ, ಪದವಿಪೂರ್ವ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಅವರ 176 ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಅರಿವಿನ ತಾಯಿಗೆ ನಮನ ಕಾರ್ಯಕ್ರಮವನ್ನು ಧರಣಿದೇವಿ ಮಾಲಗತ್ತಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯಪೂರ್ವದಿಂದಲೂ ಸಾವಿತ್ರಿಬಾಯಿ ಫುಲೆ ಅವರು ತಮ್ಮನ್ನು ತಾವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಶಿಶುಹತ್ಯೆಯನ್ನು ಬಲವಾಗಿ ವಿರೋಧಿಸಿದ್ದರು. ಈ ಕುರಿತು ಕಾಯಿದೆಯನ್ನು ತರಲು ಶ್ರಮಿಸಿದರು. ಅವರು ಮಾಡಿದ ಕೆಲಸಕಾರ್ಯಗಳು ಮುಂದಿನ ಪೀಳಿಗೆಗೂ ಉಳಿದುಕೊಂಡಿದೆ ಎಂದರು.

ದೀಪ ಹಚ್ಚಲು ಕೇವಲ ಬತ್ತಿ ಇದ್ದರೆ ಸಾಲದು, ಅದಕ್ಕೆ ಪೂರಕವಾದ ಎಲ್ಲ ಸಲಕರಣೆಗಳು ಬೇಕು ಎಂದು ಉದಾಹರಿಸಿದ ಅವರು, ವಿದ್ಯಾರ್ಥಿಗಳು ಯಾವ ರೀತಿ ತಮ್ಮನ್ನು ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬುದನ್ನು ಮನದಟ್ಟು ಮಾಡಿದರು.  ಇಂದಿನ ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವಂಥಹ ದುಷ್ಕೃತ್ಯಗಳ ವಿರುದ್ಧ ಪ್ರತಿರೋಧ ತೋರಬೇಕು. ಹೆಣ್ಣು ಅಬಲೆಯಲ್ಲ. ಆಕೆಯಲ್ಲೂ ಶಕ್ತಿಯಿದೆ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಹೋಗಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸುವ ಗುರಿ ಇರಬೇಕು. ಹಾಗಿದ್ದಾಗ ಕಾರ್ಯಸಾಧನೆ ಸುಲಭವಾಗುತ್ತದೆ. ದೇಶದಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಜನತೆ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪದವಿಪೂರ್ವ ಮತ್ತು ತಾಂತ್ರಿಕ ಶಿಕ್ಷಣದ ಉಪನಿರ್ದೇಶಕ ಜಯಪ್ರಕಾಶ್, ಮಹಾರಾಣಿ ಕಿರಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಮೋಹನ್, ನಗರಪಾಲಿಕೆ ಸದಸ್ಯ ನಾಗಭೂಷಣ್, ಸಮಾಜಸೇವಕ ರವಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: