ಕರ್ನಾಟಕಪ್ರಮುಖ ಸುದ್ದಿಮೈಸೂರು

ಡಿ.24 ರಿಂದ ದೇಶದ ಐತಿಹಾಸಿ ಸಂದೇಶ ಸಾರುವ ‘ಭಾರತೀಯ ಸಂಸ್ಕೃತಿ ಉತ್ಸವ’

ವಿಜಯಪುರ ಜಿಲ್ಲೆಯ ಕಗ್ಗೋಡನಲ್ಲಿ : ಲಕ್ಷಾಂತರ ಜನರ ನಿರೀಕ್ಷೆ

ಮೈಸೂರು,ನ.15 :  ದೇಶದ ಐತಿಹಾಸಿಕ ಸಂದೇಶ ಸಾರುವ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ‘ಭಾರತೀಯ ಸಂಸ್ಕೃತಿ ಉತ್ಸವ-5’ ಅನ್ನು ಈ ಬಾರಿ ರಾಜ್ಯದ ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ತಿಳಿಸಿದರು.

ಭಾರತ ವಿಕಾಸ ಸಂಗಮ, ವಿಜಯಪುರದ ಸಿದ್ಧೇಶ್ವರ ಸಂಸ್ಥೆ, ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.24 ರಿಂದ 31ರವರೆಗೆ ಕಗ್ಗೋಡು ಗ್ರಾಮದ ರಾಮನಗೌಡ ಬಾ ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.24ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ  ಅಥವಾ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ, ಅದರಂತೆ ವಿವಿಧ ದಿನಗಳಲ್ಲಿ ನಡೆಯುವ ಹಲವಾರು ಗಣ್ಯರು ಭಾಗಿಯಾಗಲಿದ್ದು ಡಿ.25ರ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿಯವರು ಹಾಗೂ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ, ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ, ಸುತ್ತೂರಿನ ಶ್ರೀಶಿವರಾತ್ರೀ ದೇಶಿಕೇಂದ್ರರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.

ಡಿ.26ರಂದು ಜ್ಞಾನ ಸಂಗಮ, 27-ಕೃಷಿ ಸಂಗಮ, 28-ಯುವ ಸಂಗಮ, ದಿ.29-ಕಾಯಕ ಮತ್ತು ಆರೋಗ್ಯ, ಡಿ. 30 ಗ್ರಾಮ ಸಂಗಮ ಹಾಗೂ ಡಿ.31ರಂದು ಧರ್ಮ ಮತ್ತು ಸಂಸ್ಕೃತಿ ವಿಷಯಾಧಾರಿತವಾಗಿ ಗೋಷ್ಠಿಗಳು, ಉಪನ್ಯಾಸ ನಡೆಯಲಿದ್ದು, ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ. ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಸುಮಾರು 30 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ವಸತಿ ಪಡೆಯಲಿಚ್ಚಿಸುವವರು ಮುಂಗಡವಾಗಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.

ಸರ್ಕಾರದ ಸಹಕಾರವಿಲ್ಲದೇ ಸ್ಥಳೀಯರ ಬೆಂಬಲದಿಂದ ಸುಮಾರು 20 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 10 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸಲು ಇಚ್ಚಿಸುವ ಸ್ವಯಂ ಸೇವಕರು ಹಾಗೂ ಸಮ್ಮೇಳನಕ್ಕೆ ದೇಣಿಗೆ ನೀಡಲಿಚ್ಚಿಸುವವರು ನಗದು ಅಥವಾ ವಸ್ತು ರೂಪದಲ್ಲಿ ಸಹಯೋಗ ನೀಡಬಯಸುವವರಿಗೆ ಮುಕ್ತ ಆಹ್ವಾನ ನೀಡಿದರು.

ಸಿ.ಎ. ಚಂದ್ರಶೇಖರ್ ಆರ್ ಢವಳಗಿ, ಶಾಂತಣ್ಣ ಕಡಿವಾಳ ಹಾಗೂ ಹಿರಿಯ ಕಲಾವಿದ ಯಶವಂತ ಸರ್ ದೇಶಪಾಂಡೆ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: