
ಪ್ರಮುಖ ಸುದ್ದಿ
ಶ್ರೀರಂಗಪಟ್ಟಣ ಬಳಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಸುಂಟಿಕೊಪ್ಪ ವ್ಯಕ್ತಿ ಗಂಭೀರ
ರಾಜ್ಯ(ಮಡಿಕೇರಿ) ನ. 15 :- ಶ್ರೀರಂಗಪಟ್ಟಣ ಸಮೀಪ ದ್ವಿಚಕ್ರ ವಾಹನ “ಹೋಂಡ ಡಿಯೋ” ಕ್ಕೆ ಕಾರು ಡಿಕ್ಕಿಯಾಗಿ ಸುಂಟಿಕೊಪ್ಪದ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಹೋಂಡ ಡಿಯೋದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಣ್ಣಪುಟ್ಟ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ನಿವಾಸಿ, ಗ್ರಾಮ ಪಂಚಾಯಿತಿಯ ಸ್ವಚ್ಛತಾಗಾರರಾಗಿರುವ ಎನ್. ರಾಮಚಂದ್ರ ಅವರು ತಮ್ಮ ಪತ್ನಿ ಯಶೋಧರವರೊಂದಿಗೆ ಶ್ರೀರಂಗಪಟ್ಟಣದ ನಗುವನಳ್ಳಿಯಲ್ಲಿರುವ ನಾದಿನಿಯ ಮನೆಗೆ ಹೋದವರು, ತಾ. 13 ರಂದು ಸಂಜೆ 4 ಗಂಟೆ ಸಮಯದಲ್ಲಿ ಕೆ.ಎ. 12ಕ್ಯೂ 4310 ಹೋಂಡಾ ಡಿಯೋದಲ್ಲಿ ಸುಂಟಿಕೊಪ್ಪಕ್ಕೆ ಮರಳಿ ಬರುತ್ತಿದ್ದರು. ಮಾರ್ಗಮಧ್ಯದಲ್ಲಿ ಬೆಳಗೊಳ ಮಾರ್ಗವಾಗಿ ಪ್ರಯಾಣಿಸಲು ನಗುವನಹಳ್ಳಿ ಗೇಟ್ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ದಾಟಲೆಂದು ರಸ್ತೆ ಬದಿಯಲ್ಲಿ ಹೋಂಡ ಡಿಯೋವನ್ನು ನಿಲ್ಲಿಸಿದ್ದರು. ಇದೇ ಸಮಯದಲ್ಲಿ ಬೆಂಗಳೂರು ಕಡೆಯಿಂದ ಅಜಾಗರೂಕತೆ ಹಾಗೂ ಅತೀ ವೇಗದಿಂದ ಧಾವಿಸಿ ಬಂದ ಕೆ.ಎ. 03 ಎಎಫ್ 4021 ಕಾರು, ರಸ್ತೆ ದಾಟಲೆಂದು ನಿಂತಿದ್ದ ರಾಮಚಂದ್ರರವರ ಹೋಂಡ ಡಿಯೋದ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಯಶೋಧ ಅವರ ಸಮೇತ ರಸ್ತೆಗೆ ಬಿದ್ದ ರಾಮಚಂದ್ರ ಅವರ ಬಲಕೈ, ಸೊಂಟ, ಎದೆ ಮತ್ತು ಕುತ್ತಿಗೆಗೆ ಗಂಭೀರವಾಗಿದ್ದು, ಶ್ರೀರಂಗಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮೈಸೂರಿನ ವಿದ್ಯಾರಣ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶೋಧರವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪರಾರಿ ಆಗುವ ಭರದಲ್ಲಿ ಮತ್ತೊಂದು ವಾಹನಕ್ಕೆ ಡಿಕ್ಕಿ
ರಾಮಚಂದ್ರ ಅವರ ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿದ ಕಾರು ಅಲ್ಲಿ ನಿಲುಗಡೆಗೊಳ್ಳದೇ ಮುಂದಕ್ಕೆ ಚಲಿಸಿದೆ. ಅಪಘಾತದ ನಂತರ ಕಾರನ್ನು ನಿಲ್ಲಿಸದೇ ಚಾಲಕ ವೇಗವಾಗಿ ಮೈಸೂರಿನತ್ತ ಚಲಾಯಿಸಿಕೊಂಡು ಹೋಗಿ ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಬೈಕ್ ನಲ್ಲಿ ಕಾರಿನ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದ ಕಾರು ತಪ್ಪಿಸಿಕೊಳ್ಳುವ ಭರದಲ್ಲಿ ಬೊಲೇರೋ ವಾಹನವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರಿಂದ ಕಾರು ನಜ್ಜುಗುಜ್ಜಾಗುವುದರೊಂದಿಗೆ ಚಾಲಕ ಅಟ್ಟಿಸಿಕೊಂಡು ಹೋದವರ ಸೆರೆಯಾಗಬೇಕಾಯಿತು.
ಪೊಲೀಸರಿಗೆ ಒಪ್ಪಿಸಿದರೂ ಚಾಲಕ ಮಂಗಮಾಯ!
ಹೋಂಡ ಡಿಯೋಕ್ಕೆ ಡಿಕ್ಕಿ ಹೊಡೆದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿ ಬೊಲೆರೋ ಕ್ಕೆ ಅಪ್ಪಳಿಸಿದ ಕಾರನ್ನು ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದ ಯಶೋಧರವರು ಕೂಡ ಬೇರೆ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಬೊಲೇರೋಕ್ಕೆ ಡಿಕ್ಕಿಯಾದ ನಂತರ ಕೈಗೆ ಸಿಕ್ಕಿದ ಕಾರು ಚಾಲಕನ ಕೆನ್ನೆಗೆ ಬಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಠಾಣೆಯಿಂದಲೂ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ಅವಘಡ ಕುರಿತು ಗಾಯಾಳು ರಾಮಚಂದ್ರರವರ ಪತ್ನಿ ಯಶೋಧ ಅವರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ. (ಕೆಸಿಐ,ಎಸ್.ಎಚ್)