ಪ್ರಮುಖ ಸುದ್ದಿ

ರಾಜ್ಯ ಸರ್ಕಾರ ಹೊಸಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಯತ್ನ ರೈತರನ್ನು ಗುಳೆ ಎಬ್ಬಿಸುವುದಾಗಿದೆ : ಮಂದಗೆರೆ ಜಯರಾಂ

ರಾಜ್ಯ(ಮಂಡ್ಯ)ನ.16:- ರೈತರಿಂದ ಬೀಳು ಭೂಮಿಯನ್ನು ವಶಪಡಿಸಿಕೊಂಡು ಖಾಸಗಿಯವರಿಗೆ ಗುತ್ತಿಗೆ ನೀಡಲು ಹೊಸ ಭೂಸುಧಾರಣಾ ಕಾಯ್ದೆ ತರಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವುದು ಒಕ್ಕಲು ಮಾಡುವ ರೈತರನ್ನು ಗುಳೆ ಎಬ್ಬಿಸುವ ಪ್ರಯತ್ನವಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಉಪಾಧ್ಯಕ್ಷ ಮಂದಗೆರೆ ಜಯರಾಂ ಹೇಳಿದರು .

ಕೆ.ಆರ್.ಪೇಟೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ನೀತಿಗಳಿಗೆ ಕಟ್ಟುಬಿದ್ದು ರೈತರನ್ನು ಒಕ್ಕಲೆಬ್ಬಿಸಲು ಈ ಪ್ರಯತ್ನ ಮಾಡುತ್ತಿದೆ. ರೈತರು ಮತ್ತು ಭೂಮಿಗೂ ಇರುವ ನಿಕಟ ಬಾಂಧವ್ಯವನ್ನು ಹೋಗಲಾಡಿಸಲು ಈ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದರು.

ಈ ಕಾನೂನು ಜಾರಿಗೆ ಬಂದರೆ ಕನಿಷ್ಟ ಎರಡು ವರ್ಷ ಬೀಳು ಬಿಟ್ಟ ಜಮೀನನ್ನು ಖಾಸಗಿಯವರು ಗುತ್ತಿಗೆ ನೀಡುವ ಕ್ರಮೇಣ ಅದನ್ನು ಅವರಿಗೆ ಮಾರುವಂತೆ ಮಾಡುವ ಹುನ್ನಾರ ಅಡಗಿದೆ, ಇದರಿಂದ ಮುಂದಿನ ದಿನಗಳಲ್ಲಿ ರೈತರು ಭೂಮಿಯ ಮೇಲಿನ ತಮ್ಮ ಬಾಂಧವ್ಯವನ್ನು ಕಳೆದುಕೊಳ್ಳಲಿದ್ದಾರೆ. ಸರ್ಕಾರದ ಈ ನೀತಿ ಅವೈಜ್ಞಾನಿಕ ವಾಗಿದೆ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ. ಇಷ್ಟೊಂದು ಭೂಮಿ ಈಗ ಅನುಪಯುಕ್ತವಾಗಿಲ್ಲ. ಈ ಅನುಪಯುಕ್ತ ಭೂಮಿಯಲ್ಲಿ ಪಶುಪಾಲನೆಗೆ ಅನುಕೂಲವಾಗಿದೆ. ಕುರಿಗಾಹಿಗಳಿಗೆ ದನ-ಕರುಗಳಿಗೆ ಮೇವು ಸಿಗುತ್ತಿದೆ. ಒಂದು ರೀತಿಯಲ್ಲಿ ಇದು ಲಾಭವಾಗಿದ್ದು ಹೈನೋದ್ಯಮ ಮತ್ತು ಮಾಂಸ ಉತ್ಪಾದನೆಗೆ ಸಹಕಾರಿಯಾಗಿದೆ. ಆದರೆ ರಾಜ್ಯಸರ್ಕಾರ ಖಾಸಗಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗುಂಪು ಕೃಷಿಗೆ ಉತ್ತೇಜನ ನೀಡುತ್ತೇವೆ ಎಂದು ಹೇಳುತ್ತಾ ರೈತರನ್ನು ನಗರದತ್ತ ಮುಖ ಮಾಡುವಂತೆ ಮಾಡಲು ಮಾಡಿರುವ ಹುನ್ನಾರ ಎಂದರು. ಕೃಷಿ ಮುಕ್ತ ಭಾರತವನ್ನಾಗಿಸುವ, ಕೃಷಿಕರನ್ನು ಒಕ್ಕಲೆಬ್ಬಿಸುವ ಈ ಪ್ರಯತ್ನವನ್ನು ರೈತಸಂಘ ತೀರ್ವವಾಗಿ ವಿರೋಧಿಸಲಿದೆ ಎಂದ ಅವರು ಭೂಮಿಯ ಮೇಲಿನ ರೈತರ ಹಕ್ಕು ಮತ್ತು ಸ್ವಾಮ್ಯವನ್ನು ಉಳಿಸಲು ಯಾವುದೇ ಹೋರಾಟಕ್ಕೆ ರೈತಸಂಘ ಸಿದ್ದವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ, ಮುಖಂಡ ಲಕ್ಷ್ಮೀಪುರ ಜಗದೀಶ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: